ರಾಹುಲ್ ಮೋದಿಯನ್ನು ಅಪ್ಪಿಕೊಂಡ ರಹಸ್ಯ ಬಯಲು

By Web DeskFirst Published Jul 26, 2018, 8:27 AM IST
Highlights

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್ ಗಾಂಧಿ ಅಪ್ಪಿಕೊಂಡಿದ್ದು ಏಕೆ ಎನ್ನುವ ರಹಸ್ಯ ಇದೀಗ ಬಯಲಾಗಿದೆ. ರಾಹುಲ್ ಅಪ್ಪುಗೆಗಾಗಿ ಕೆಲ ತಿಂಗಳ ಹಿಂದೆಯೇ ಅವರು ನಿರ್ಧರಿಸಿದ್ದರು ಎನ್ನುವ ವಿಚಾರ ಬಯಲಾಗಿದೆ. 

ನವದೆಹಲಿ: ಅವಿಶ್ವಾಸ ನಿರ್ಣಯ ಕುರಿತ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕಾಏಕಿ ಅಪ್ಪಿಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೀಗೇಕೆ ಮಾಡಿದರು ಎಂಬ ರಹಸ್ಯ ಇದೀಗ ಬಯಲಾಗಿದೆ. ಕಾಂಗ್ರೆಸ್‌ನ್ನು ಹಿಗ್ಗಾಮುಗ್ಗ ಮೋದಿಯವರು ಟೀಕಿಸಿದ್ದಕ್ಕೆ ಅವರನ್ನು ಅಪ್ಪಿಕೊಂಡು ಟಾಂಗ್ ನೀಡಬೇಕೆಂದು ಫೆಬ್ರವರಿಯಲ್ಲೇ ರಾಹುಲ್‌ಗಾಂಧಿ ನಿರ್ಧರಿಸಿದ್ದರು. ಆದರೆ ಅದು ಈಗ ಕೈಗೂಡಿತು ಎಂದು ಮೂಲಗಳು ತಿಳಿಸಿವೆ.

ಸಂಸತ್ತಿನಲ್ಲಿ ಪ್ರಧಾನಿಯವರನ್ನು ಅಪ್ಪಿಕೊಂಡ ರಾಹುಲ್‌ಗಾಂಧಿಯವರ ಈ ವರ್ತನೆಯನ್ನು ಅಂದು ಬಿಜೆಪಿ ಕಟುವಾಗಿ ಟೀಕಿಸಿದ್ದರೆ, ಕಾಂಗ್ರೆಸ್ ಬಲವಾಗಿ ಸಮರ್ಥಿಸಿಕೊಂಡಿತ್ತು. ಜೊತೆಗೆ ಇದೇನು ಪೂರ್ವಯೋಜಿತ ನಿರ್ಧಾರವಲ್ಲ. ಆ ಕ್ಷಣಕ್ಕೆ ಅವರು ಬಿಜೆಪಿ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಲು ಹಾಗೆ ನಡೆದುಕೊಂಡರು ಎಂದು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದರು. ಆದರೆ ಅವರ ಆ ವರ್ತನೆ ಪೂರ್ವನಿರ್ಧರಿತವಾದದ್ದು. ಆದರೆ ಕಣ್ಣು ಮಿಟುಕಿಸಿದ್ದು ಮಾತ್ರ ಆ ಕ್ಷಣಕ್ಕೆ ನಡೆದದ್ದು ಎನ್ನುತ್ತವೆ ರಾಹುಲ್ ಅವರ ಆಪ್ತ ಮೂಲಗಳು. ಫೆಬ್ರವರಿಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ ಅವರು ಇಡೀ ಗಾಂಧಿ ಪರಿವಾರದ ವಿರುದ್ಧ ಹಿಗ್ಗಾಮುಗ್ಗಾ ವಾಕ್ ಪ್ರಹಾರ ನಡೆಸಿದ್ದರು. ಆ ಸಂದರ್ಭ ‘ಮೋದಿ ಅವರು ಕೋಪಗೊಂಡಿದ್ದಾರೆ, ಅವರನ್ನು ಅಪ್ಪಿಕೊಳ್ಳಬೇಕು. 

ಒಂದೇ ರಾಜಕೀಯ  ವಾತಾವರಣದಲ್ಲಿ ದ್ವೇಷರಹಿತವಾಗಿ ಎಲ್ಲರೂ ಇರಬಹುದು ಎಂಬ ಸಂದೇಶ ರವಾನಿಸಬೇಕು’ ಎಂದು ರಾಹುಲ್ ಅವರಿಗೆ ಅನ್ನಿಸಿತ್ತಂತೆ. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಎನ್ನುತ್ತವೆ ಮೂಲಗಳು. ಆನಂತರ ಈ ಬಗ್ಗೆ ಚರ್ಚೆ ಆಗಿರಲಿಲ್ಲ. ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ಫೆಬ್ರವರಿಯಲ್ಲಿ ಅಂದು ಕೊಂಡಿದ್ದನ್ನು ರಾಹುಲ್ ಜಾರಿಗೆತಂದಿದ್ದಾರೆ ಎಂದು ಮೂಲಗಳು ಹೇಳುತ್ತವೆ. ರಾಹುಲ್ ಅವರು ಸಂಸತ್ ಕಲಾಪದಿಂದ ವಿಶ್ರಾಂತಿ ಪಡೆ ಯಲು ಹೊರಡುತ್ತಿರಬಹುದು ಎಂದುಕೊಂಡಿದ್ದೆವು. ಆದರೆ ಅವರು ನೇರವಾಗಿ ಹೋಗಿ ಪ್ರಧಾನಿ ಯವರನ್ನು ಅಪ್ಪಿಕೊಂಡರು ಎಂದು ಕಾಂಗ್ರೆಸ್ ಸಂಸದರೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

click me!