ಸಚಿವ ಡಿಕೆಶಿಯನ್ನು ಹೆಲಿಕಾಪ್ಟರ್'ನಲ್ಲಿ ಕರೆದೋಯ್ದು ಧೈರ್ಯ ತುಂಬಿದ ರಾಹುಲ್ ಗಾಂಧಿ

By Suvarna Web DeskFirst Published Aug 12, 2017, 11:44 PM IST
Highlights

ಶನಿವಾರ ಸಂಜೆ 5 ಗಂಟೆಗೆ ರಾಯಚೂರಿನ ಕಾಂಗ್ರೆಸ್ ಸಮಾವೇಶದ ಬಳಿಕ ಹೆಲಿಕಾಪ್ಟರ್‌ನಲ್ಲಿ ರಾಹುಲ್ ತೆರಳಬೇಕಿತ್ತು. ಈ ವೇಳೆ ಸಮಾವೇಶದ ಸ್ಥಳದಿಂದ ಹೆಲಿಪ್ಯಾಡ್‌ಗೆ ತೆರಳಿದರು. ಹೆಲಿಪ್ಯಾಡ್‌ನಲ್ಲಿ ರಾಹುಲ್ ಅವರನ್ನು ಬೀಳ್ಕೊಡಲು ಬಂದಿದ್ದ ಸಚಿವ ಶಿವಕುಮಾರ್ ಅವರ ಕೈ ಹಿಡಿದ ರಾಹುಲ್, ‘ಆಪ್ ಭೀ ಸಾಥ್ ಚಲೋ, ಬಾತ್ ಕರತೇ ಹೈ’ ಎಂದು ಹೆಲಿಕಾಪ್ಟರ್ ಏರುವಂತೆ ಸೂಚಿಸಿದರು.

ಬೆಂಗಳೂರು(ಆ.12): ಏಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಯಚೂರಿನ ಸಮಾವೇಶದ ಬಳಿಕ ಬಳ್ಳಾರಿ ಸಮೀಪದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳುವಾಗ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕರೆದೊಯ್ದು ಸುಮಾರು ಅರ್ಧಗಂಟೆಗಳ ಕಾಲ ಹೆಲಿಕಾಪ್ಟರ್‌ನಲ್ಲೇ ಮಾತುಕತೆ ನಡೆಸಿದ್ದಾರೆ.

ಶನಿವಾರ ಸಂಜೆ 5 ಗಂಟೆಗೆ ರಾಯಚೂರಿನ ಕಾಂಗ್ರೆಸ್ ಸಮಾವೇಶದ ಬಳಿಕ ಹೆಲಿಕಾಪ್ಟರ್‌ನಲ್ಲಿ ರಾಹುಲ್ ತೆರಳಬೇಕಿತ್ತು. ಈ ವೇಳೆ ಸಮಾವೇಶದ ಸ್ಥಳದಿಂದ ಹೆಲಿಪ್ಯಾಡ್‌ಗೆ ತೆರಳಿದರು. ಹೆಲಿಪ್ಯಾಡ್‌ನಲ್ಲಿ ರಾಹುಲ್ ಅವರನ್ನು ಬೀಳ್ಕೊಡಲು ಬಂದಿದ್ದ ಸಚಿವ ಶಿವಕುಮಾರ್ ಅವರ ಕೈ ಹಿಡಿದ ರಾಹುಲ್, ‘ಆಪ್ ಭೀ ಸಾಥ್ ಚಲೋ, ಬಾತ್ ಕರತೇ ಹೈ’ ಎಂದು ಹೆಲಿಕಾಪ್ಟರ್ ಏರುವಂತೆ ಸೂಚಿಸಿದರು.

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಹಾಗೂ ಏಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತ್ರ ರಾಹುಲ್ ಜೊತೆ ಹೆಲಿಕಾಪ್ಟರ್‌ನಲ್ಲಿ ತೆರಳಬೇಕಿತ್ತು. ಆದರೆ ಸ್ವತಃ ರಾಹುಲ್ ಗಾಂಧಿ ಸೂಚನೆ ಮೇರೆಗೆ ಸಚಿವ ಡಿ.ಕೆ.ಶಿವಕುಮಾರ್ ಕೂಡ ಹೆಲಿಕಾಪ್ಟರ್ ಏರಬೇಕಾಯಿತು.

ಈ ಮಧ್ಯೆ ರಾಯಚೂರಿನಿಂದ ಜಿಂದಾಲ್‌ವರೆಗಿನ ಪ್ರಯಾಣದ ವೇಳೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಅವರು ಸಚಿವ ಶಿವಕುಮಾರ್ ಅವರೊಂದಿಗೆ ಇತ್ತೀಚಿನ ಆದಾಯ ತೆರಿಗೆ ದಾಳಿ ಹಾಗೂ ನಂತರದ ವಿಚಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಎಂತಹುದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ತಮ್ಮ ಬೆಂಬಲಕ್ಕೆ ಇರುತ್ತದೆ ಎಂದು ಆತ್ಮಸ್ಥೈರ್ಯ ತುಂಬಿದರು. ಜೊತೆಗೆ ಗುಜರಾತ್ ಶಾಸಕರನ್ನು ಸಚಿವ ಶಿವಕುಮಾರ್ ಬೆಂಗಳೂರಿಗೆ ಕರೆತಂದು ನಿಭಾಯಿಸಿದ ರೀತಿಗೂ ರಾಹುಲ್ ಪ್ರಶಂಸೆ ವ್ಯಕ್ತಪಡಿಸಿದರು ಎನ್ನಲಾಗಿದೆ.

ಬಳಿಕ ಸಂಜೆ 5.45ಕ್ಕೆ ಬಳ್ಳಾರಿ ಸಮೀಪದ ತೋರಣಗಲ್ಲಿನ ಜಿಂದಾಲ್ ನಿಲ್ದಾಣಕ್ಕೆ ತೆರಳಿದ ರಾಹುಲ್ ಗಾಂಧಿ ನಂತರ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಮತ್ತಿತರರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದರೆ, ಸಚಿವ ಡಿ.ಕೆ.ಶಿವಕುಮಾರ್ ಮಾತ್ರ ರಸ್ತೆ ಮೂಲಕ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಬೇರೊಂದು ವಿಮಾನದ ಮೂಲಕ ಬೆಂಗಳೂರಿಗೆ ವಾಪಸಾದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

(ಸಾಂಧರ್ಬಿಕ ಚಿತ್ರ)

click me!