ರಫೇಲ್‌ ಇದ್ದರೆ, ಇನ್ನಷ್ಟು ಭರ್ಜರಿ ದಾಳಿ ಸಾಧ್ಯವಿತ್ತು: ಪ್ರಧಾನಿ ಮೋದಿ

By Web DeskFirst Published Mar 3, 2019, 8:35 AM IST
Highlights

ರಫೇಲ್‌ ಯುದ್ಧ ವಿಮಾನದ ಕೊರತೆಯ ಕುರಿತು ಪ್ರಧಾನಿ ಮಾತು| ನನ್ನನ್ನು ಟೀಕಿಸಬೇಕೆಂಬ ಭರದಲ್ಲಿ, ದೇಶದ ವಿರೋಧಿಗಳಾಗಬೇಡಿ| ಉಗ್ರರ ವಿರುದ್ಧದ ನಮ್ಮ ಹೋರಾಟಕ್ಕೆ ಇಡೀ ವಿಶ್ವವೇ ಬೆಂಬಲಿಸಿದೆ| ಆದರೆ, ಕೆಲವು ಪ್ರತಿಪಕ್ಷಗಳು ಮಾತ್ರ ಈ ಬಗ್ಗೆ ಪ್ರಶ್ನೆ ಮಾಡುತ್ತಿವೆ| ಇಂಡಿಯಾ ಟುಡೇ ಸಮಾವೇಶದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಚಾಟಿ

ನವದೆಹಲಿ[ಮಾ.03]: ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನಿರಂತರ ಆರೋಪ ಮಾಡುತ್ತಿರುವ ಬೆನ್ನಲ್ಲೇ, ಭಾರತದ ಬಳಿ ರಫೇಲ್‌ ಯುದ್ಧ ವಿಮಾನ ಇದ್ದದ್ದೇ ಆಗಿದ್ದರೆ, ಉಗ್ರರ ದಮನ ವಿಚಾರದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ನಡೆದ ದಾಳಿಯನ್ನು ಇನ್ನಷ್ಟುಮಾರಕ ಮಾಡಬಹುದಿತ್ತು ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.

ಇಂಡಿಯಾ ಟುಡೇ ಸುದ್ದಿ ವಾಹಿನಿ ಶನಿವಾರ ಏರ್ಪಡಿಸಿದ್ದ ಇಂಡಿಯಾ ಟುಡೇ ಕಾನ್‌ಕ್ಲೇವ್‌(ಇಂಡಿಯಾ ಟುಡೇ ಸಮಾವೇಶ)ದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಫ್ರಾನ್ಸ್‌ ಮೂಲದ ಡÜಸಾಲ್ಟ್‌ ಏವಿಯೇಷನ್‌ನಿಂದ ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿರುವ ತಮ್ಮ ಸರ್ಕಾರದ ನಿರ್ಧಾರವನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು.

ಈ ವೇಳೆ ಪ್ರತಿಪಕ್ಷಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಮೋದಿ ಅವರು, ‘ಹಲವು ವರ್ಷಗಳ ಕಾಲ ದೇಶವನ್ನು ಆಳಿದ ಹಲವರು, ಭದ್ರತಾ ಸಲಕರಣೆ ಖರೀದಿಯಲ್ಲಿ ತಮಗೆ ಆಪ್ತರಾದ ಮಧ್ಯಮವರ್ತಿಗಳ ಮೂಲಕ ಹಲವು ಹಗರಣಗಳನ್ನು ಎಸಗಿದರು. ಈ ಹಿಂದಿನ ಸರ್ಕಾರಗಳು, ಟೋಕನ್‌ ವಿಧಾನವನ್ನು ಅನುಸರಿಸುತ್ತಿದ್ದವು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಒಟ್ಟಾರೆ(ಟೋಟಲ್‌) ವಿಧಾನ ಅನುಸರಿಸಲಾಗುತ್ತಿದೆ. ಈ ಹಿಂದಿನ ಸರ್ಕಾರಗಳಿಗೆ ನಿರುದ್ಯೋಗ ಭತ್ಯೆ ನೀಡುವುದು ಹಾಗೂ ಹಗರಣಗಳಲ್ಲಿ ಭಾಗಿಯಾಗುವುದರಲ್ಲಷ್ಟೇ ಆಸಕ್ತಿ ಇತ್ತು. ಆದರೆ, ಇಂಥ ಸಂಸ್ಕೃತಿಯು ದೇಶದ ಅಭಿವೃದ್ಧಿಯನ್ನು ಮೊಟಕುಗೊಳಿಸಿದೆ,’ ಎಂದು ಹೇಳಿದರು.

‘ನನ್ನನ್ನು ಟೀಕಿಸಿ. ಆದರೆ, ರಾಷ್ಟ್ರದ ಹಿತಾಸಕ್ತಿ ವಿಚಾದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳಬೇಡಿ. ಅಲ್ಲದೆ, ನನ್ನ ವಿರುದ್ಧದ ಟೀಕೆ ಹಾಗೂ ಆರೋಪಗಳಿಂದ ಉಗ್ರ ಹಫೀಜ್‌ ಸಯೀದ್‌ ಸೇರಿದಂತೆ ಇತರ ಭಯೋತ್ಪಾದಕರಿಗೆ ಯಾವುದೇ ರೀತಿ ಲಾಭವಾಗದಂತೆ ಎಚ್ಚರ ವಹಿಸಿ,’ ಎಂದು ವಿಪಕ್ಷಗಳಿಗೆ ಮೋದಿ ಅವರು ಕಿವಿಮಾತು ಹೇಳಿದರು.

ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಇಡೀ ವಿಶ್ವವೇ ಬೆಂಬಲ ನೀಡುತ್ತಿದೆ. ಆದರೆ, ಕೆಲವು ಪಕ್ಷಗಳು ಮಾತ್ರ, ಉಗ್ರರ ವಿರುದ್ಧದ ಹೋರಾಟವನ್ನು ಪ್ರಶ್ನೆ ಮಾಡುತ್ತಿವೆ. ನನ್ನ ವಿರೋಧಿಗಳು ಯಾವುದೇ ಕಾರಣಕ್ಕೂ ದೇಶವನ್ನು ದುರ್ಬಲಗೊಳಿಸಲು ಮತ್ತು ಶತ್ರುಗಳಿಗೆ ಶಕ್ತಿ ತುಂಬಬಾರದು. ಕೆಲವರು ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ವಿರುದ್ಧವೇ ಮಾತನಾಡಲು ಮುಂದಾಗುತ್ತಿದ್ದಾರೆ ಎಂದು ಯಾವುದೇ ಪಕ್ಷದ ಹೆಸರು ಅಥವಾ ಯಾವುದೇ ನಾಯಕರ ಹೆಸರುಗಳನ್ನು ಪ್ರಸ್ತಾಪಿಸದೇ ವಿಪಕ್ಷಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು.

click me!