ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ!

By Web DeskFirst Published Sep 30, 2019, 7:30 AM IST
Highlights

ಬೇರೆಯವರ ದೂರವಾಣಿಗಳನ್ನು ಕಳ್ಳಗಿವಿ ಇಟ್ಟು ಕೇಳಿಸುವುದು ದೊಡ್ಡ ಅಪರಾಧ| ಯಾರೇ ಫೋನ್‌ ಟ್ಯಾಪ್‌ ಮಾಡಿದ್ದರೂ ಸುಮ್ಮನಿರಲ್ಲ| ಕಂದಾಯ ಸಚಿವ ಆರ್‌.ಅಶೋಕ್‌ ಗುಡುಗು|

ಮದ್ದೂರು[ಸೆ.30]: ಯಾವುದೇ ಸಮುದಾಯ ಶ್ರೀಗಳಾಗಿರಲಿ ಅವರ ದೂರವಾಣಿ ಕರೆಗಳನ್ನು ಕದ್ದಾಲಿಸಿದ್ದರೂ, ಅದರು ಆ ಸಮುದಾಯದ ಜನರಿಗೆ ಮಾಡಿದ ವಂಚನೆ. ಯಾರೇ ಈ ಕೆಲಸ ಮಾಡಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಗುಡುಗಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕಲಿಗ ಸಮುದಾಯದ ಶ್ರೀಗಳು ಸೇರಿದಂತೆ ನಾಲ್ಕೈದು ಸಮುದಾಯದ ಶ್ರೀಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿರುವುದಾಗಿ ಗೊತ್ತಾಗಿದೆ. ಬೇರೆಯವರ ದೂರವಾಣಿಗಳನ್ನು ಕಳ್ಳಗಿವಿ ಇಟ್ಟು ಕೇಳಿಸುವುದು ದೊಡ್ಡ ಅಪರಾಧ. ಯಾರೇ ಈ ಕೆಲಸ ಮಾಡಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ನಾನು ಈಗಾಗಲೇ ಒಕ್ಕಲಿಗ ಸಮುದಾಯದ ಸ್ವಾಮೀಜಿ ಅವರೊಂದಿಗೆ ಮಾತನಾಡಿದ್ದೇನೆ. ಅವರ ಮನಸ್ಸಿಗೂ ನೋವುಂಟಾಗಿದೆ. ಇಂತಹ ನಡವಳಿಕೆಯನ್ನು ಯಾವ ಕಾರಣಕ್ಕೂ ಆ ಜನಾಂಗ ಕ್ಷಮಿಸುವುದಿಲ್ಲ ಎಂದರು.

ನ್ಯಾಯಾಲಯದ ಆದೇಶ ಬರುವ ತನಕ ಕೆ.ಆರ್‌.ಪೇಟೆಯ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಉಪಚುನಾವಣೆಯಲ್ಲಿ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಯಾವುದೇ ನಿರ್ಧಾರವೂ ಆಗಿಲ್ಲ ಎಂದರು. ಕೋರ್ಟ್‌ ತೀರ್ಪು ನೋಡಿಕೊಂಡು ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ ಎಂದರು.

ಜಗಳವಾಡಲು, ಬೈಯ್ಯಲು ಸಿದ್ದರಾಮಯ್ಯ ಮತ್ತು ಈಶ್ವರಪ್ಪನವರಿಗೆ ಮಾತ್ರ ಶಕ್ತಿ ಇರೋದು. ಯಡಿಯೂರಪ್ಪನವರು ನಮ್ಮ ನಾಯಕ. ಮುಖ್ಯಮಂತ್ರಿಯಾಗಿ ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಬಗ್ಗೆ ಅಧಿಕಾರವಿದೆ. ಅವರ ವಿವೇಚನೆಗೆ ತಕ್ಕಂತೆ ಅಧಿಕಾರ ನೀಡಿದ್ದಾರೆ. ಅಧಿಕಾರವನ್ನು ಬಳಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಹಾಗೂ ಮುನಿಯಪ್ಪನವರ ಜಗಳವನ್ನು ನೋಡ್ತಾ ಇದ್ದೇನೆ. ಜಗಳ ಕಾಂಗ್ರೆಸ್‌ನಲ್ಲಿದೆ. ನಮ್ಮ ಪಕ್ಷದಲ್ಲಿ ಯಾವ ಆಂತರಿಕ ಜಗಳವಿಲ್ಲ. ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಸಮರ್ಥಿಸಿಕೊಂಡರು.

ಸರ್ಕಾರ ರಚನೆಯಾಗುವುದೇ ವಿಳಂಬವಾಯಿತು. ಸರ್ಕಾರ ಒಂದು ವರ್ಷದ ಹಿಂದೆಯೇ ಬರಬೇಕಿತ್ತು. ಸಮ್ಮಿಶ್ರ ಸರ್ಕಾರ ಬಂತು. ಅದಕ್ಕಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಇನ್ನು ಮುಂದೆ ಸುಸೂತ್ರವಾಗಿ ಅಭಿವೃದ್ಧಿ ಪರವಾಗಿ ನಡೆಯುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

click me!