ಮೇಲ್ವರ್ಗಕ್ಕೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲು!

By Web DeskFirst Published Jan 9, 2019, 9:32 AM IST
Highlights

ಮೇಲ್ವರ್ಗಕ್ಕೆ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲು!| ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಯಲ್ಲಿ ಉಲ್ಲೇಖ| ಇದಕ್ಕಾಗಿ 10 ಲಕ್ಷ ಸೀಟುಗಳ ಸಂಖ್ಯೆ ಹೆಚ್ಚಳ ಸಂಭವ

ನವದೆಹಲಿ[ಜ.09]: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಸಮುದಾಯಗಳಿಗೆ ಶೇ.10ರಷ್ಟುಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಅದನ್ನು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಣೆ ಮಾಡುತ್ತಿದೆ.

ಲೋಕಸಭೆಯಲ್ಲಿ ಮಂಗಳವಾರ ಮಂಡನೆಯಾದ ವಿಧೇಯಕದಲ್ಲಿ ಈ ಕುರಿತ ಪ್ರಸ್ತಾಪವಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಅನುದಾನಿತ ಅಥವಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 124ನೇ ತಿದ್ದುಪಡಿಯಡಿ ಮೀಸಲಾತಿ ಒದಗಿಸಲಾಗುತ್ತದೆ. ಸಂವಿಧಾನದ 30ನೇ ಪರಿಚ್ಛೇದದಲ್ಲಿ ಉಲ್ಲೇಖವಾಗಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಇದು ಅನ್ವಯವಾಗುವುದಿಲ್ಲ. ಉದ್ಯೋಗ ಸೇರ್ಪಡೆ ಸಂದರ್ಭದಲ್ಲೂ ಮೀಸಲಾತಿ ನೀಡಲಾಗುತ್ತದೆ ಎಂಬ ಮಾಹಿತಿ ಇದೆ.

ಸೀಟುಗಳ ಸಂಖ್ಯೆ ಹೆಚ್ಚಳ:

ಮೇಲ್ವರ್ಗಕ್ಕೆ ಶೇ.10ರಷ್ಟುಮೀಸಲಾತಿ ತರುತ್ತಿರುವ ಕೇಂದ್ರ ಸರ್ಕಾರ, ಅದರ ಜಾರಿ ಕುರಿತು ಈಗಲೇ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಮೀಸಲಾತಿ ನೀಡಲು ಉದ್ದೇಶಿಸಿರುವುದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಸಂಖ್ಯೆ (ಸೀಟು)ಯನ್ನು ಹೆಚ್ಚಿಸಬೇಕಾಗುತ್ತದೆ. ಸರ್ಕಾರಿ ಅಥವಾ ಖಾಸಗಿ ಸೇರಿದಂತೆ ಯುಜಿಸಿ ಮಾನ್ಯತೆ ಪಡೆದಿರುವ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮೂಲಗಳು ತಿಳಿಸಿವೆ.

ಆರಂಭಿಕ ಅಂದಾಜಿನ ಪ್ರಕಾರ ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿಗಳು ಹಾಗೂ ಐಐಎಂನಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆಯನ್ನು 10 ಲಕ್ಷದಷ್ಟುಹೆಚ್ಚಿಸಬೇಕಾಗುತ್ತದೆ ಎಂದು ವಿವರಿಸಿವೆ.

2017-18ನೇ ಸಾಲಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ಪ್ರಕಾರ ದೇಶದಲ್ಲಿ 903 ವಿಶ್ವವಿದ್ಯಾಲಯಗಳು, 3900 ಕಾಲೇಜುಗಳು ಇವೆ.

click me!