ಕೊಡಗು ಜಲಪ್ರಳಯಕ್ಕೆ ಭೂಕಂಪನ ಕಾರಣವಲ್ಲ

By Web DeskFirst Published Aug 24, 2018, 8:16 AM IST
Highlights

ಭೂಕಂಪನದ ಪರಿಣಾಮವಾಗಿಯೇ ಭೂ ಕುಸಿತ ಸಂಭವಿಸಿದೆ ಎಂಬುದು ಕೇವಲ ವದಂತಿ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಭೂ ವಿಜ್ಞಾನಗಳ ಇಲಾಖೆಯ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ವಿನೀತ್‌ ಕೆ. ಗೆಹ್ಲೋಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.
 

ಬೆಂಗಳೂರು :  ಕೊಡಗು ಜಿಲ್ಲೆಯಲ್ಲಿ ಕಳೆದ ತಿಂಗಳು ಸಂಭವಿಸಿದ್ದ ಭೂಕಂಪಕ್ಕೂ ಹಾಲಿ ನಡೆದಿರುವ ಭೂಕುಸಿತಕ್ಕೂ ಯಾವುದೇ ಸಂಬಂಧವಿಲ್ಲ. ಭೂಕಂಪನದ ಪರಿಣಾಮವಾಗಿಯೇ ಭೂ ಕುಸಿತ ಸಂಭವಿಸಿದೆ ಎಂಬುದು ಕೇವಲ ವದಂತಿ. ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ಕೇಂದ್ರ ಭೂ ವಿಜ್ಞಾನಗಳ ಇಲಾಖೆಯ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ನಿರ್ದೇಶಕ ಡಾ.ವಿನೀತ್‌ ಕೆ. ಗೆಹ್ಲೋಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಹಾರ ವಿಭಾಗದ ಆಯುಕ್ತ ಗಂಗಾರಾಮ್‌ ಬಂಡೇರಿಯಾ ಅವರಿಗೆ ಪತ್ರ ಬರೆದಿರುವ ಅವರು, ಜು.9ರಂದು ಮಧ್ಯಾಹ್ನ 12.52ರ ಸುಮಾರಿಗೆ 3.4 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಭೂಕಂಪನವಾಗಿದೆ. ಆದರೆ, ಭೂಕಂಪನವಾಗಿರುವುದಕ್ಕೂ ಭೂಕುಸಿತ, ಗುಡ್ಡ ಕುಸಿತ ಘಟನೆಗಳಿಗೂ ಸಂಬಂಧವಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ದಾಖಲೆಯಿಲ್ಲ ಎಂದು ಹೇಳಿದ್ದಾರೆ.

Latest Videos

ಪಶ್ಚಿಮಘಟ್ಟದ ಸಹ್ಯಾದ್ರಿ ವಲಯದಲ್ಲಿ ಸಣ್ಣ ಪ್ರಮಾಣದ ಭೂಕಂಪನ ನಡೆಯುವುದು ನಿರಂತರ ಪ್ರಕ್ರಿಯೆ. ಆದರೆ, ಇಂತಹ ಭೂಕಂಪನದಿಂದ ಭೂಕುಸಿತ ಸಂಭವಿಸಿದ ಉದಾಹರಣೆಯಿಲ್ಲ. ಸಾಮಾನ್ಯವಾಗಿ ಸಹ್ಯಾದ್ರಿ ಭಾಗದಲ್ಲಿ ಸಂಭವಿಸುವ ಭೂಕುಸಿತಕ್ಕೆ ವ್ಯಾಪಕ ಮಳೆ ಮುಖ್ಯ ಕಾರಣವಾಗಿದ್ದರೆ, ಅರಣ್ಯ ನಾಶ ಹಾಗೂ ಇಳಿಜಾರು ಪ್ರದೇಶದಲ್ಲಿ ನಡೆದಿರುವ ವ್ಯಾಪಕ ಅಗೆತವು ಕಾರಣವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೊಡಗು ಭಾಗದಲ್ಲಿ ಈ ಬಾರಿ ಸಂಭವಿಸಿದ ವ್ಯಾಪಕ ಭೂಕುಸಿತಕ್ಕೆ ನಿಖರ ಕಾರಣ ತಿಳಿದುಕೊಳ್ಳಲು ಆಳವಾದ ಅಧ್ಯಯನ ನಡೆಯಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಣ್ಣು ಕುಸಿತ ಮತ್ತು ಗುಡ್ಡ ಕುಸಿತ ಸಂಭವಿಸಿರುವುದಕ್ಕೆ ಕಳೆದ ತಿಂಗಳು ಸಂಭವಿಸಿದ ಭೂಕಂಪನವೇ ಕಾರಣ ಎಂಬ ವದಂತಿಯು ರಾಜ್ಯದಲ್ಲಿ ಹಬ್ಬಿದ್ದು, ಕೊಡಗಿನ ಜನರು ಭಯಭೀತರಾಗಿದ್ದರು. ಮಾಧ್ಯಮಗಳಲ್ಲಿ ಈ ವದಂತಿ ಬಿತ್ತರಗೊಳ್ಳುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರವು ಕೇಂದ್ರದ ಭೂಗರ್ಭ ತಜ್ಞರನ್ನು ಸಂಪರ್ಕಿಸಿ ಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುವಂತೆ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಈ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಭೂಗರ್ಭ ತಜ್ಞರು ವದಂತಿಗಳನ್ನು ತಳ್ಳಿಹಾಕಿ ಸ್ಪಷ್ಟನೆ ನೀಡಿದ್ದಾರೆ.

ವಿಪತ್ತು ನಿರ್ವಹಣಾ ಅಧಿಕಾರಿಗಳ ಸಂಖ್ಯೆ ನೀಡಲು ಮನವಿ

ವಿಪತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ನೀಡುವಂತೆ ಭೂ ವಿಜ್ಞಾನಿ ಡಾ. ವಿನೀತ್‌ ಕೆ. ಗೆಹ್ಲೋಟ್‌ ತಿಳಿಸಿದ್ದಾರೆ. ಭೂಕಂಪನದ ಬಗ್ಗೆ ದಿನದ 24 ಗಂಟೆಯೂ ಎಸ್‌ಎಂಎಸ್‌ ಸಂದೇಶ ರವಾನಿಸುವ ಸಂಬಂಧ ಇದು ಅನುಕೂಲವಾಗಲಿದೆ. ಹೀಗಾಗಿ ಅಧಿಕಾರಿಗಳ ಸಂಖ್ಯೆ ನೀಡುವಂತೆ ಕೋರಿದ್ದಾರೆ.

ಕೊಡಗಿಗೆ ಇಂದು ರಕ್ಷಣಾ ಮಂತ್ರಿ

ಬೆಂಗಳೂರು: ಅಪಾರ ಜೀವ ಹಾನಿ, ಆಸ್ತಿ-ಪಾಸ್ತಿ ಹಾನಿಯಾಗಿರುವ ಕೊಡಗು ಜಿಲ್ಲೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 8.20ಕ್ಕೆ ಮೈಸೂರಿನಿಂದ ಹೊರಟು ಹಾರಂಗಿ ಹೆಲಿಪ್ಯಾಡ್‌ ತಲುಪಲಿದ್ದಾರೆ. ನಂತರ ಕುಶಾಲನಗರಕ್ಕೆ ತಲುಪಿ ಅಲ್ಲಿಂದ ನೆರೆಪೀಡಿತ ಪ್ರದೇಶ ವೀಕ್ಷಿಸಲಿದ್ದಾರೆ.

7 ಹಳ್ಳಿಗಳಲ್ಲಿ ಮನೆಗಳ ನಿರ್ಮಾಣ

ಮಡಿಕೇರಿ: ಕೊಡಗಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ 7 ಹಳ್ಳಿಗಳಲ್ಲಿ ಒಟ್ಟು 42 ಎಕರೆ ಜಾಗದಲ್ಲಿ ಮನೆ ಕಟ್ಟಿಕೊಡಲು ಜಿಲ್ಲಾಡಳಿತ ತಾತ್ಕಾಲಿಕವಾಗಿ ಜಾಗ ಪರಿಶೀಲನೆ ನಡೆಸಿದೆ. ಪರಿಶೀಲನೆ ನಡೆಸಿದ ಸ್ಥಳ ಸೂಕ್ತವೆಂದು ಕಂಡು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

click me!