ಏಪ್ರಿಲ್‌ ಅಂತ್ಯಕ್ಕೆ ಪಿಯು, ಎಸ್ಸೆಸ್ಸೆಲ್ಸಿ ಫಲಿತಾಂಶ

By Web DeskFirst Published Mar 19, 2019, 8:11 AM IST
Highlights

ಚುನಾವಣೆ ಎಫೆಕ್ಟ್: ಪ್ರತಿ ವರ್ಷಕ್ಕಿಂತ 15 ದಿನ ಮೊದಲೇ ಎಸ್‌ಎಸ್್ಎಲ್‌ಸಿ ರಿಸಲ್ಟ್‌ | ಸಾಮಾನ್ಯವಾಗಿ ಮೇ ತಿಂಗಳ ಮಧ್ಯದಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶ 15 ದಿನ ಮೊದಲ ಪ್ರಕಟಗೊಳ್ಳಲಿದೆ.

ಬೆಂಗಳೂರು (ಮಾ. 19):  ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್‌ ಅಂತ್ಯಕ್ಕೆ ಪ್ರಕಟವಾಗಲಿದೆ. ಸಾಮಾನ್ಯವಾಗಿ ಮೇ ತಿಂಗಳ ಮಧ್ಯದಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶ 15 ದಿನ ಮೊದಲ ಪ್ರಕಟಗೊಳ್ಳಲಿದೆ.

ಮಾ.25 ರಿಂದ ದ್ವಿತೀಯ ಪಿಯುಸಿ ಮತ್ತು ಏ.10ರಿಂದ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಆರಂಭಿಸಲಾಗುತ್ತದೆ. ಏಪ್ರಿಲ್‌ ಅಂತ್ಯಕ್ಕೆ ಎರಡೂ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್‌ ತಿಳಿಸಿದರು.  ಮಾ.21ರಿಂದ ಪಿಯು ಉತ್ತರ ಪತ್ರಿಕೆಗಳ ಕೋಡಿಂಗ್‌ ಮತ್ತು ಡಿ ಕೋಡಿಂಗ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ. 25ರಿಂದ ಮೌಲ್ಯಮಾಪನ ಆರಂಭಗೊಳ್ಳಲಿದೆ.

ರಾಜ್ಯದಲ್ಲಿ ಏ.18 ಮತ್ತು ಏ.23 ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ಏಪ್ರಿಲ್‌ ಅಂತ್ಯಕ್ಕೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಅಂಕಗಳನ್ನು ಆನ್‌ಲೈನ್‌ ಪೋರ್ಟಿಂಗ್‌ ಮೂಲಕ ನೋಂದಾಯಿಸುವುದನ್ನು ಕಳೆದ ಬಾರಿಯ ಪೂರಕ ಪರೀಕ್ಷೆಯಲ್ಲಿಯೇ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿತ್ತು. ಹೀಗಾಗಿ, ಈ ಬಾರಿ ನೇರವಾಗಿ ನೋಂದಣಿ ಮಾಡಲಾಗುವುದು. ಪಿಯು ಉತ್ತರ ಪತ್ರಿಕೆಗಳನ್ನು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡರಲ್ಲಿಯೂ ಮಾಡಲಾಗುವುದು ಎಂದು ಹೇಳಿದರು.

ಪಿಯು ಉಪನ್ಯಾಸಕರ ಸಂಘಕ್ಕೆ ಮೌಲ್ಯಮಾಪನ ಮಾಡುವಂತೆ ಮನವಿ ಮಾಡಲಾಗುವುದು. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ, ಮೌಲ್ಯಮಾಪನ ಮಾಡಿಸುವುದಕ್ಕಾಗಿ ಈಗಾಗಲೇ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸುಸೂತ್ರವಾಗಿ ಮೌಲ್ಯಮಾಪನ ನಡೆಯಲಿದೆ ಎಂದು ಹೇಳಿದರು.

ಮೇ 6 ರಿಂದ ದ್ವಿತೀಯ ಪಿಯು ತರಗತಿ

ದ್ವಿತೀಯ ಪಿಯುಸಿ ತರಗತಿಗಳು ಮೇ 6ರಿಂದ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ವರ್ಷ ಕೂಡ ಮೇ 2ರಿಂದ ತರಗತಿಗಳನ್ನು ಆರಂಭಿಸಿದ್ದರಿಂದ ಉಂಟಾದ ಪರಿಣಾಮ ಫಲಿತಾಂಶ ಬಂದ ಬಳಿಕ ತಿಳಿಯಲಿದೆ. ಹೀಗಾಗಿ, ಈ ವರ್ಷ ಕೂಡ ಮೇ 6ರಿಂದ ತರಗತಿಗಳು ಆರಂಭಗೊಳ್ಳಲಿವೆ. ಪಿಯು ಇಲಾಖೆಯನ್ನು ರಜೆ ರಹಿತ ಇಲಾಖೆಯನ್ನಾಗಿ ಘೋಷಿಸುವುದಕ್ಕೆ ಸರ್ಕಾರದ ಹಂತದಲ್ಲಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ಜಾಫರ್‌ ಹೇಳಿದರು.

click me!