ಗಣೇಶ ಹಬ್ಬ: ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸಲು ಸಿಎಂ ಸೂಚನೆ

Published : Aug 21, 2017, 10:12 PM ISTUpdated : Apr 11, 2018, 12:47 PM IST
ಗಣೇಶ ಹಬ್ಬ: ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸಲು ಸಿಎಂ ಸೂಚನೆ

ಸಾರಾಂಶ

ಗೌರಿ-ಗಣೇಶ ಬಕ್ರೀದ್ ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು (ಆ.21): ಗೌರಿ-ಗಣೇಶ ಬಕ್ರೀದ್ ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸಂಜೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಗಣೇಶ ಹಬ್ಬ ಹಾಗ ಬಕ್ರೀದ್ ಆಚರಣೆಗೆ ಸಕಲ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರನ್ನುದ್ದೇಶಿಸಿ ಮಾತನಾಡಿ, ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬ ಏಕಕಾಲಕ್ಕೆ ಬಂದಿದೆ. ಹೀಗಾಗಿ ಬಿಗಿ ಬಂದೋಬಸ್ತ್ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸಣ್ಣ ಅಹಿತಕರ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಕೆಲವರು ಪ್ರಯತ್ನ ಮಾಡಬಹುದು. ಅಂತಹ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ, ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಭದ್ರತೆ ಜತೆಗೆ ವಾಹನ ಹಾಗೂ ಜನಸಂಚಾರಕ್ಕೆ ಕೂಡ ತೊಂದರೆ ಆಗದಂತೆ ಕೂಡ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಗೌರಿ-ಗಣೇಶ, ಬಕ್ರೀದ್ ಹಬ್ಬ ಏಕಕಾಲದಲ್ಲಿ ಆಚರಿಸುವುದರಿಂದ ಶಾಂತಿ ಕದಡಬಹುದಾದ ಸಮಾಜ ಘಾತಕ ವ್ಯಕ್ತಿಗಳನ್ನು ಗುರುತಿಸಬೇಕು. ಅವರ ಚಲನವಲನದ ಮೇಲೆ ನಿಗಾ ಇಡಬೇಕು. ಅಗತ್ಯವಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು. ಹಬ್ಬದ ಆಚರಣೆ ವೇಳೆ ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು. ತಮ್ಮ ಅಧೀನದ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದ ಮೇಲಿರುವಂತೆ ನೋಡಿಕೊಳ್ಳಬೇಕು. ಆಯಾ ಜಿಲ್ಲೆಯ ಹಾಗೂ ಕಮೀಷನರೇಟ್ ಉಸ್ತುವಾರಿ ಹೊಂದಿರುವ ಅಧಿಕಾರಿಗಳು ಆಗಾಗ ಮೇಲ್ವಿಚಾರಣೆ ನಡೆಸಬೇಕು. ಎರಡೂ ಹಬ್ಬಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸುರಕ್ಷತೆಗೆ ಆದ್ಯತೆ ನೀಡಿ

ಗಣಪತಿ ವಿಸರ್ಜನೆ ವೇಳೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಕೆರೆ, ಬಾವಿ, ನದಿಗಳಲ್ಲಿ ಗಣಪತಿ ವಿಸರ್ಜಿಸುವಾಗ ಜೀವರಕ್ಷಕ ಸಾಧನಗಳು ಇರಬೇಕು. ವಿಸರ್ಜನೆಯ ಜನಜಂಗುಳಿ ವೇಳೆ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಹಬ್ಬದ ವೇಳೆ ಪೊಲೀಸ್ ಗಸ್ತು ಸಹ ಬಿಗಿಯಾಗಿರಬೇಕು. ಮತೀಯ ಶಕ್ತಿಗಳ ಮೇಲೂ ಕಣ್ಣಿಡಬೇಕು. ಎಲ್ಲೆಡೆ ಶಾಂತಿ ಸಭೆಗಳನ್ನು ನಡೆಸಬೇಕು. ಉಸ್ತುವಾರಿ ಎಡಿಜಿಪಿಗಳು ತಮಗೆ ನಿಗಪಡಿಸಿರುವ ಜಿಲ್ಲೆಗಳಿಗೆ ಭೇಟಿ ಕೊಡಬೇಕು ಎಂದು ಆದೇಶ ನೀಡಿದರು. ರಾಜ್ಯದ ವಿವಿಧ ಪೊಲೀಸ್ ವಲಯಗಳು ಮತ್ತು ಕಮಿಷ್ನರೇಟ್ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಶಾಖೆಗಳ ಮುಖ್ಯಸ್ಥರು ಈಗಾಗಲೇ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌