ಬಂಟ್ವಾಳ ಉದ್ವಿಗ್ನ; ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಮೊದಲಾದವರ ಬಂಧನ

By Suvarna Web DeskFirst Published Jul 7, 2017, 2:21 PM IST
Highlights

ಆರೆಸ್ಸೆಸ್ ಕಾರ್ಯಕರ್ತನ ಮೇಲಿನ ಹಲ್ಲೆ ಖಂಡಿಸಿ ವಿವಿಧ ಬಲಪಂಥೀಯ ಸಂಘಟನೆಗಳು ಹಾಗೂ ಬಿಜೆಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಬಂಟ್ವಾಳಾದ್ಯಂತ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿವೆ. ಪೊಲೀಸರು ಹಿಂಸಾಚಾರವಾಗದಂತೆ ಎಲ್ಲೆಡೆ ಬಿಗಿಭದ್ರತೆ ಕೈಗೊಂಡಿದ್ದಾರೆ.

ಮಂಗಳೂರು(ಜುಲೈ 07): ಕರಾವಳಿ ಮತ್ತೆ ಕೊತ ಕೊತ ಕುದಿಯುತ್ತಿದೆ. ಆರ್​​​ಎಸ್​​ಎಸ್​​ ಕಾರ್ಯಕರ್ತ ಶರತ್ ಮೇಲಿನ ಹಲ್ಲೆಯನ್ನು ಖಂಡಿಸಿ ಬಂಟ್ವಾಳದ ಬಿ.ಸಿ.ರೋಡಿನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಿಷೇದಾಜ್ಞೆ ಮಧ್ಯೆ ಪ್ರತಿಭಟನೆ ನಡೆಸಲು ಮುಂದಾಗಿದ್ದರಿಂದ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಸಂಘ ಪರಿವಾರದ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದ್ರು.

ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರಿಂದ ಬಿ.ಸಿ.ರೋಡಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನೆಗಾಗಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಜಮಾಯಿಸುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಕ್ಕೂ ಅಧಿಕ ಪೊಲೀಸರು ಅವರನ್ನು ಸುತ್ತುವರಿದರು. ಸಂಸದ ನಳಿನ್ ಕುಮಾರ್ ಸೇರಿದಂತೆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

Latest Videos

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಹಲವು ಸಂಘ ಪರಿವಾರದ ಮುಖಂಡರು ಭಾಗಿಯಾಗಿದ್ದರು. ಸದ್ಯ ಪರಿಸ್ಥಿತಿ ಪೊಲೀಸ್‌ ನಿಯಂತ್ರಣದಲ್ಲಿದ್ದು, ಪ್ರತಿಭಟನಾ ಸ್ಥಳಕ್ಕೆ ಐಜಿಪಿ ಹರಿಶೇಖರನ್ ಆಗಮಿಸಿದ್ದು, ಪರಿಸ್ಥಿತಿ ಅವಲೋಕಿಸಿದರು.

click me!