ಅಭ್ಯರ್ಥಿ ಗೊಂದಲ ನಿವಾರಣೆಗೆ ಜೆಡಿಎಸ್‌ ನಾಯಕರ ಕಸರತ್ತು

By Suvarna Web DeskFirst Published Mar 28, 2018, 8:09 AM IST
Highlights

ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಣವನ್ನು ರಾಜಕೀಯ ಅಸ್ತಿತ್ವದ ಪ್ರಶ್ನೆ ಎಂದೇ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜೆಡಿಎಸ್‌ ಚುನಾವಣೆ ಗೆಲ್ಲಲು ತನ್ನ ಬತ್ತಳಿಕೆಯಲ್ಲಿನ ಚುನಾವಣಾ ಅಸ್ತ್ರಗಳಿಗೆ ಮತ್ತಷ್ಟುವೇಗ ನೀಡಿದೆ.

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಕಣವನ್ನು ರಾಜಕೀಯ ಅಸ್ತಿತ್ವದ ಪ್ರಶ್ನೆ ಎಂದೇ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜೆಡಿಎಸ್‌ ಚುನಾವಣೆ ಗೆಲ್ಲಲು ತನ್ನ ಬತ್ತಳಿಕೆಯಲ್ಲಿನ ಚುನಾವಣಾ ಅಸ್ತ್ರಗಳಿಗೆ ಮತ್ತಷ್ಟುವೇಗ ನೀಡಿದೆ.

ಕಾಂಗ್ರೆಸ್‌-ಬಿಜೆಪಿಗಿಂತ ಮೊದಲು ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿ ಪ್ರಚಾರಕ್ಕೆ ಧುಮುಕಿದ್ದು, ಮತದಾನಕ್ಕೆ ದಿನಗಣನೆ ಆರಂಭವಾದ ಬೆನ್ನಲ್ಲೇ ಪ್ರಚಾರ ಕಾರ್ಯವನ್ನು ಮತ್ತಷ್ಟುಚುರುಕುಗೊಳಿಸಲು ನಿರ್ಧರಿಸಿದೆ.

ಈಗಾಗಲೇ ವಿಕಾಸಪರ್ವ ಹೆಸರಲ್ಲಿ ಪ್ರಚಾರವನ್ನು ಬಿರುಸಿನಿಂದಲೇ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಪ್ರಾರಂಭಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ತಮ್ಮ ಎಲ್ಲಾ ತಂತ್ರಗಳನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜೆಡಿಎಸ್‌ ಸುಮಾರು 126 ಮಂದಿಯ ಹೆಸರನ್ನು ಪ್ರಕಟಿಸಿದೆ. ಈಗಾಗಲೇ ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಎರಡನೇ ಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು, ಇದಕ್ಕಾಗಿ ಸಿದ್ಧತೆ ನಡೆಸಿದೆ.

ಕೆಲವು ಕ್ಷೇತ್ರದಲ್ಲಿನ ಅಭ್ಯರ್ಥಿಗಳ ನಡುವಿನ ಗೊಂದಲಗಳನ್ನು ನಿವಾರಿಸಲು ದೇವೇಗೌಡ ಮತ್ತು ಕುಮಾರಸ್ವಾಮಿ ಕಸರತ್ತು ಮುಂದುವರಿಸಿದ್ದಾರೆ. ಚುನಾವಣೆ ದಿನಾಂಕ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲಗಳನ್ನು ಮುಕ್ತಾಯಗೊಳಿಸಿ ಎರಡನೇ ಹಂತದ ಟಿಕೆಟ್‌ ಪ್ರಕಟಿಸಲು ಸಜ್ಜಾಗಿದ್ದಾರೆ. ಏ.10ರವರೆಗೆ ರಾಜ್ಯದ ವಿವಿಧೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕುಮಾರಸ್ವಾಮಿ ಶೀಘ್ರದಲ್ಲಿಯೇ ಎರಡನೇ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ದೇವೇಗೌಡ ಅವರು ತಮ್ಮ ರಾಜಕೀಯ ಅನುಭವವನ್ನು ಚುನಾವಣೆಗೆ ಪಣಕ್ಕಿಟ್ಟಿದ್ದು, ಎರಡನೇ ಪಟ್ಟಿಬಿಡುಗಡೆಗೆ ಕಾದು ನೋಡುವ ತಂತ್ರ ಅನುಸರಿಸುವಂತೆ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಪ್ರಕಟವಾಗಲಿ, ನಂತರ ನೋಡೋಣ ಎಂಬ ಆಲೋಚನೆ ಇದೆ. ಬಿಜೆಪಿ-ಕಾಂಗ್ರೆಸ್‌ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ನೋಡಿ ಅವರಿಗೆ ಸೂಕ್ತ ಎದುರಾಳಿಗಳನ್ನು ಕಣಕ್ಕಿಳಿಸುವ ಯೋಚನೆ ಜೆಡಿಎಸ್‌ನದ್ದಾಗಿದೆ.

ತನ್ನ ಅಸ್ತಿತ್ವ ಪ್ರಶ್ನಿಸಿದ ರಾಷ್ಟ್ರೀಯ ಪಕ್ಷಗಳಿಗೆ ಬಿಎಸ್‌ಪಿಯೊಂದಿಗೆ ಕೈಜೋಡಿಸಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಜೆಡಿಎಸ್‌ ತಿರುಗೇಟು ನೀಡಿದೆ. ಬೆಂಗಳೂರಿನಲ್ಲಿ ನಡೆದ ಬಿಎಸ್‌ಪಿ-ಜೆಡಿಎಸ್‌ನ ಸಮಾವೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸಮಾವೇಶಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಆ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಬಿಎಸ್‌ಪಿಯೊಂದಿಗೆ ಮೈತ್ರಿ ಬಳಿಕ ಜೆಡಿಎಸ್‌ ಪಕ್ಷಕ್ಕೂ ಗೆಲ್ಲುವ ಹೊಸ ಹುಮ್ಮಸ್ಸು ಬಂದಿದ್ದು, ಅದೇ ಹುರುಪಿನಲ್ಲಿ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸದಲ್ಲಿ ತೊಡಗಿದ್ದಾರೆ. ಪಕ್ಷದ ನಾಯಕರ ಮತ್ತು ಕಾರ್ಯಕರ್ತರಲ್ಲಿ ಗೆಲ್ಲುವ ವಿಶ್ವಾಸವನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ.

click me!