ಅಯೋಧ್ಯೆಯಲ್ಲಿ ಹಿಂದೂ ಶಕ್ತಿ ಪ್ರದರ್ಶನ

By Web DeskFirst Published Nov 24, 2018, 7:24 AM IST
Highlights

ರಾಮಮಂದಿರ ನಿರ್ಮಾಣ ಸಂಬಂಧ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ಭಾನುವಾರ ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲು ಭರ್ಜರಿ ಸಿದ್ಧತೆ ನಡೆಸಿದೆ.

ಅಯೋಧ್ಯೆ/ಲಖನೌ: ರಾಮಮಂದಿರ ನಿರ್ಮಾಣ ಸಂಬಂಧ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ (ವಿಎಚ್‌ಪಿ) ಭಾನುವಾರ ಶ್ರೀರಾಮಚಂದ್ರನ ಜನ್ಮಸ್ಥಳ ಅಯೋಧ್ಯೆಯಲ್ಲಿ ಬೃಹತ್‌ ಸಮಾವೇಶ ಆಯೋಜಿಸಲು ಭರ್ಜರಿ ಸಿದ್ಧತೆ ನಡೆಸಿದೆ. ‘ಧರ್ಮ ಸಭೆ’ ಹೆಸರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರಾಮಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಇದೇ ವೇಳೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಮಿತ್ರಪಕ್ಷವಾಗಿರುವ ಶಿವಸೇನೆ ಕೂಡ ರಾಮಮಂದಿರಕ್ಕಾಗಿ ಅಯೋಧ್ಯೆಯಲ್ಲಿ ಭಾನುವಾರವೇ ಪ್ರತ್ಯೇಕ ರಾರ‍ಯಲಿ ನಡೆಸುತ್ತಿದೆ. ಆ ಪಕ್ಷ ಕೂಡ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಯತ್ನಿಸುತ್ತಿರುವುದರಿಂದ 1992ರ ಬಾಬ್ರಿ ಮಸೀದಿ ಧ್ವಂಸ ಘಟನೆ ಬಳಿಕ ಹೆಚ್ಚಿನ ಸಂಖ್ಯೆಯ ಜನರನ್ನು ಅಯೋಧ್ಯೆ ಕಾಣುವ ಸಾಧ್ಯತೆ ನಿಚ್ಚಳವಾಗಿದೆ. ಇದರ ಬೆನ್ನಿಗೇ ಅಯೋಧ್ಯೆ ಸ್ಥಳೀಯ ನಿವಾಸಿಗಳಲ್ಲಿ ಆತಂಕವೂ ಹೆಚ್ಚಾಗುತ್ತಿದೆ.

ಹೊರರಾಜ್ಯಗಳಿಂದ ಬರುವ ಜನ ಹಿಂಸೆ ಸೃಷ್ಟಿಸಬಹುದು, ಕಾನೂನು- ಸುವ್ಯವಸ್ಥೆ ಹದಗೆಡಬಹುದು ಎಂಬ ಭೀತಿಯಿಂದ ಅಯೋಧ್ಯೆಯಲ್ಲಿನ ಹಿಂದು- ಮುಸ್ಲಿಮರು ಅಗತ್ಯ ಪಡಿತರ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳಲು ಆರಂಭಿಸಿದ್ದಾರೆ. ಕೆಲ ಮುಸ್ಲಿಂ ಯುವಕರು ಈಗಾಗಲೇ ನಗರ ತೊರೆದಿದ್ದಾರೆ ಎಂಬ ವರದಿಗಳೂ ಬಂದಿವೆ. ಇದಕ್ಕೆ ಇಂಬು ನೀಡುವಂತೆ ಅಯೋಧ್ಯೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಲೆಕ್ಕಿಸದೇ ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ಮುಸ್ಲಿಮರ ಓಣಿ ಸೇರಿದಂತೆ ಹಲವೆಡೆ ಗುರುವಾರ ಮೆರವಣಿಗೆ ನಡೆಸಿದ್ದಾರೆ. ಹಿಂಸಾಚಾರ ಭುಗಿಲೇಳುವುದನ್ನು ತಡೆಯುವ ಸಲುವಾಗಿ ಅಯೋಧ್ಯೆಗೆ ಭಾರಿ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ಜಮಾವಣೆ ಮಾಡಲಾಗಿದೆ. ಈ ನಡುವೆ ವಿಎಚ್‌ಪಿ ಹಾಗೂ ಶಿವಸೇನೆ ಸಮಾವೇಶಕ್ಕೆ ಅಯೋಧ್ಯೆಯಲ್ಲಿನ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಪರಿಸ್ಥಿತಿಯನ್ನು ಕೆಡಿಸಲು ಬರುತ್ತಿರುವ ಈ ನಾಯಕರಿಗೆ ಕಪ್ಪು ಬಾವುಟ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಯೋಧ್ಯೆ ಜೊತೆಜೊತೆಗೇ ಭಾನುವಾರ ಬೆಂಗಳೂರು ಮತ್ತು ಮಹಾರಾಷ್ಟ್ರದ ನಾಗಪುರದಲ್ಲೂ ಹಿಂದೂ ಸಂಘಟನೆಗಳು ಬೃಹತ್‌ ಸಮಾವೇಶ ಹಮ್ಮಿಕೊಂಡಿವೆ. ಒಟ್ಟಾರೆ ಈ ಸಮಾವೇಶಗಳಿಂದಾಗಿ ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಅಯೋಧ್ಯೆ ರಾಮಮಂದಿರ ವಿವಾದ ಮುನ್ನೆಲೆಗೆ ಬರುವುದು ಬಹುತೇಕ ಖಚಿತವಾಗಿದೆ.

ಶಕ್ತಿ ಪ್ರದರ್ಶನ:  ಅಯೋಧ್ಯೆ ರಾಮಜನ್ಮಭೂಮಿ ವಿವಾದ ಕುರಿತ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಕೂಗು ಎದ್ದಿತ್ತು. ಅದರ ಮುಂದುವರಿದ ಭಾಗವಾಗಿ, ರಾಮಮಂದಿರ ನಿರ್ಮಾಣ ಸಂಬಂಧ ಜನ ಬೆಂಬಲ ಕ್ರೋಢೀಕರಿಸಲು ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದು ಪರಿಷತ್‌ ದೇಶಾದ್ಯಂತ ಧರ್ಮಸಭೆಗಳನ್ನು ನಡೆಸಲು ಉದ್ದೇಶಿಸಿದೆ. ಭಾನುವಾರ ಅಯೋಧ್ಯೆ, ಬೆಂಗಳೂರು ಹಾಗೂ ನಾಗಪುರದಲ್ಲಿ ಈ ಸಮಾವೇಶಗಳು ನಡೆಯಲಿವೆ. ಡಿ.9ರಂದು ದೆಹಲಿಯಲ್ಲಿ ಸಾಧು-ಸಂತರ ಮೆರವಣಿಗೆ ಹಾಗೂ ಧರ್ಮಸಭೆ ಆಯೋಜಿಸಲು ಉದ್ದೇಶಿಸಲಾಗಿದೆ.

ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮ ಈಗ ಗಮನ ಸೆಳೆಯುತ್ತಿದೆ. ಈ ಕಾರ್ಯಕ್ರಮದಲ್ಲಿ 1ರಿಂದ 2 ಲಕ್ಷ ರಾಮಭಕ್ತರು ಪಾಲ್ಗೊಳ್ಳಬಹುದು ಎಂಬ ಅಂದಾಜಿದೆ. ಅದಕ್ಕೂ ಮೀರಿ ಜನರು ಬರುವ ಸಾಧ್ಯತೆ ಇದೆ ಎಂದು ವಿಎಚ್‌ಪಿ ನಾಯಕರು ಹೇಳುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಹೊಣೆಯನ್ನು ಶಾಸಕರು, ಸಂಸದರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವಿಎಚ್‌ಪಿ ಸಮಾವೇಶ ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲ ನೆರವು ಕೊಡಿ ಎಂದು ಪಕ್ಷದಿಂದ ಸೂಚನೆ ಬಂದಿದೆ ಎಂದು ಬಿಜೆಪಿ ಸಂಸದರೊಬ್ಬರೇ ತಿಳಿಸಿದ್ದಾರೆ. ಈ ನಡುವೆ ಶಿವಸೇನೆ ಕೂಡ ಭಾರಿ ಸಂಖ್ಯೆಯ ಜನರನ್ನು ಸೇರಿಸಲು ಯತ್ನಿಸುತ್ತಿದೆ. ಈ ಎರಡೂ ಸಮಾವೇಶಗಳಿಂದ ಅಯೋಧ್ಯೆ ತುಂಬಿ ತುಳುಕಬಹುದು ಎಂದು ಹೇಳಲಾಗುತ್ತಿದೆ.

ಈ ಸಮಾವೇಶಗಳಿಂದಾಗಿ ಅಯೋಧ್ಯೆ ನಿವಾಸಿಗಳು ಹೆದರಿದ್ದಾರೆ. 1992ರ ರೀತಿಯ ಘಟನೆ ಮರುಕಳಿಸಬಹುದು ಎಂಬ ಭೀತಿಯಿಂದ ಎರಡೂ ಸಮಾವೇಶಗಳನ್ನು ಬಹಿಷ್ಕರಿಸಲು ಅಯೋಧ್ಯೆ ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಅಯೋಧ್ಯೆಯಲ್ಲಿ ಭಾನುವಾರ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಕೆಲ ಮುಸ್ಲಿಮರು ಈಗಾಗಲೇ ನಗರ ಬಿಟ್ಟು ಹೋಗಿದ್ದಾರೆ ಎಂದು ಅಯೋಧ್ಯೆ ಪಾಲಿಕೆ ಸದಸ್ಯ ಹಾಜಿ ಅಸಾದ್‌ ತಿಳಿಸಿದ್ದಾರೆ.

17 ನಿಮಿಷದಲ್ಲಿ ಬಾಬ್ರಿ ಧ್ವಂಸ, ಸುಗ್ರೀವಾಜ್ಞೆಗೆ ಎಷ್ಟುಕಾಲ ಬೇಕು?

ರಾಮ ಭಕ್ತರು ಬಾಬ್ರಿ ಮಸೀದಿಯನ್ನು ಕೇವಲ 17 ನಿಮಿಷಗಳಲ್ಲಿ ಉರುಳಿಸಿದ್ದರು. ಹೀಗಿರುವಾಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುವಾಗುವಂತೆ ಕಾಗದ ಪತ್ರ ತಯಾರಿಸಲು ಎಷ್ಟುಸಮಯಬೇಕು? ವಿಧಾನಸಭೆಯಿಂದ ಹಿಡಿದು ರಾಷ್ಟ್ರಪತಿಭವನದವರೆಗೆ ಬಿಜೆಪಿಯದ್ದೇ ಸರ್ಕಾರ ಇರುವಾಗ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರಕ್ಕೆ ಎಷ್ಟುಸಮಯಬೇಕು?

- ಸಂಜಯ್‌ ರಾವುತ್‌, ಶಿವಸೇನೆ ಮುಖಂಡ

click me!