
ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದಕ್ಕೆ ಬಲಿಯಾದವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ, ಘಟನೆಗೆ ಸಂಬಂಧಿಸಿ ದೇವಸ್ಥಾನದ ಟ್ರಸ್ಟಿ ಸೇರಿ ಏಳು ಮಂದಿ ವಿರುದ್ಧ ಭಾನುವಾರ ಎಫ್ ಐಆರ್ ದಾಖಲಾಗಿದೆ.
ಪ್ರಸಾದ ಸೇವಿಸಿದವರಲ್ಲಿ 11 ಮಂದಿ ಶುಕ್ರವಾರವೇ ಮೃತಪಟ್ಟಿದ್ದರು. ಇನ್ನು ಗಂಭೀರವಾಗಿ ಅಸ್ವಸ್ಥಗೊಂಡು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಬಿದರಹಳ್ಳಿಯ ಮುರುಗೇಶ ಎಂಬುವರ ಪತ್ನಿ ಸಾಲಮ್ಮ(35) ಮತ್ತು ಎಂ.ಜಿ.ದೊಡ್ಡಿಯ ಮುರುಗೇಶ್ ಎಂಬುವರ ಪತ್ನಿ ಮಗೇಶ್ವರಿ(30) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.
ಇದರೊಂದಿಗೆ ಅಸ್ವಸ್ಥರು ಹಾಗೂ ಅವರ ಕುಟುಂಬದವರಲ್ಲಿ ಮಡು ಗಟ್ಟಿದ್ದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪ್ರಸಾದ ಸ್ವೀಕರಿಸಿದ 100ಕ್ಕೂ ಹೆಚ್ಚಿನ ಮಂದಿಯ ಪೈಕಿ ಒಟ್ಟು ಇನ್ನೂ 69 ಮಂದಿ ಮೈಸೂರಿನ 11 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಸ್ವಸ್ಥರ ಪೈಕಿ 8 ಮಂದಿ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ.
7 ಮಂದಿ ವಿರುದ್ಧ ದೂರು ದಾಖಲು: ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿ ರಾಮಾಪುರ ಪೊಲೀಸರು ದೇಗುಲದ ಟ್ರಸ್ಟ್ ವ್ಯವಸ್ಥಾಪಕ, ಅಡುಗೆ ತಯಾರಕ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೇಗುಲದ ಟ್ರಸ್ಟ್ ವ್ಯವಸ್ಥಾಪಕ ಮಹದೇವಸ್ವಾಮಿ , ಧರ್ಮದರ್ಶಿ ಚಿನ್ನಪ್ಪಿ, ಲೋಕೇಶ್, ಅಡುಗೆ ಭಟ್ಟರಾದ ಈರಣ್ಣ, ಪುಟ್ಟಸ್ವಾಮಿ, ಅರ್ಚಕ ಮಹದೇವು ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.