ಮತ್ತೊಂದು ಒಳ್ಳೆ ಕಾರ್ಯಕ್ಕೆ ಕೈ ಹಾಕಿದ ಪ್ರಕಾಶ್ ರೈ

By Web DeskFirst Published Sep 17, 2018, 1:47 PM IST
Highlights

 ಮನುಷ್ಯರ ನಡುವೆ ಬಂಧಗಳು ವೃದ್ಧಿಸಲು, ಮಾನವೀಯ ಸಂಬಂಧಗಳು ಬಲಗೊಳ್ಳಲು ನೆನಪುಗಳು ಅತಿ ಮುಖ್ಯ ಎಂದು ನಟ ಪ್ರಕಾಶ್ ರೈ ಹೇಳಿದರು. 

ಬೆಂಗಳೂರು : ನೆನಪುಗಳು ಮಾನವೀಯತೆ ಹಾಗೂ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಹೀಗಾಗಿ ನೆನಪುಗಳನ್ನು ಮಾಸುವಂತೆ ಮಾಡುವ ಡೆಮೆನ್ಷಿಯಾ (ಮರೆವು) ಕಾಯಿಲೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಚಿಕಿತ್ಸೆ ಬಗ್ಗೆ ವಿಸ್ತೃತ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಡೆಮೆನ್ಷಿಯಾ-2018’ ಮೂರು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ಮನುಷ್ಯರ ನಡುವೆ ಬಂಧಗಳು ವೃದ್ಧಿಸಲು, ಮಾನವೀಯ ಸಂಬಂಧಗಳು ಬಲಗೊಳ್ಳಲು ನೆನಪುಗಳು ಅತಿ ಮುಖ್ಯ. ಹಿರಿಯ ನಾಗರೀಕರಲ್ಲಿ ಮರೆವು ಉಂಟು ಮಾಡುವ ಡೆಮೆನ್ಷಿಯಾ, ಮೆದುಳು ಸಮಸ್ಯೆಯಿಂದ ನೆನಪುಗಳನ್ನು ಮರೆಯುವ ಅಲ್ಜಮೈರ್, ಅಮ್ನೆಷಿಯಾ ಬಗ್ಗೆ ಜನರಿಗೆ ಹೆಚ್ಚು ಅರಿವು ಮೂಡಿಸಬೇಕು. ಇಂತಹ ಸಮಸ್ಯೆಯುಳ್ಳವರನ್ನು ಮಾನವೀಯತೆ ದೃಷ್ಟಿಯಿಂದ ನೋಡುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. 

ನಾನು ಪ್ರಸ್ತುತ ಮರೆವು ಇರುವ ವ್ಯಕ್ತಿಯಾಗಿ ಒಂದು ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದೇನೆ. ಇಂತಹ ಪ್ರಮುಖ ಪಾತ್ರಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಲು ನೈಟೀಂಗಲ್ ಆಸ್ಪತ್ರೆ ಸಿಬ್ಬಂದಿಯನ್ನು ಭೇಟಿ ಮಾಡಿ ಹಲವು ಬಾರಿ ಮಾತುಕತೆ ನಡೆಸಿದ್ದೇನೆ. ಇದೇ ಸಮಸ್ಯೆ ನನ್ನ ಗುರುಗಳಾದ ಖ್ಯಾತ ನಿರ್ದೇಶಕ ಹಾಗೂ ಅದ್ಭುತ ವ್ಯಕ್ತಿತ್ವ ಹೊಂದಿದ್ದ ಕೆ. ಬಾಲಚಂದರ್ ಅವರಿಗೂ ಇತ್ತು. ಆದರೆ, ಅದನ್ನು ಸಮಾಜ ದುರ್ಬಳಕೆ ಮಾಡಿಕೊಂಡು ನಗಲು ಹಾಗೂ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿತ್ತು ಎಂದು ಹೇಳಿದರು.

ಗೇಲಿ ಮಾಡಲೆಂದೇ ವೇದಿಕೆಗೆ ಕರೆಯುತ್ತಿದ್ದರು: ನಾನು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಸಿನಿಮಾವೊಂದು ಯಶಸ್ವಿಯಾಗಿದ್ದ ಸಮಯದಲ್ಲಿ ನಾನು ನಟಿಸದ ಚಿತ್ರವೊಂದರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆ. ಬಾಲಚಂದರ್ ತೆರಳಿದ್ದರು. ಈ ವೇಳೆ ಆ ಚಿತ್ರದಲ್ಲಿನ ಮುಖ್ಯ ಪಾತ್ರ ವಹಿಸಿದ್ದ ನಟನ ಬಗ್ಗೆ ಮಾತನಾಡದೆ ನನ್ನ ಶ್ಲಾಘಿಸಿ ಮಾತನಾಡಿದ್ದರು. 

ಈ ವೇಳೆ ಅವರನ್ನು ಸಾಕಷ್ಟು ಮಂದಿ ಅವಹೇಳನ ಮಾಡಿದ್ದರು. ನಾನು ಅವರ ಮನೆಗೆ ಭೇಟಿ ನೀಡಿ ಮಾತನಾಡಿದಾಗ ಅವರಿಗೆ ಮರೆವು ಸಮಸ್ಯೆ ಇರುವುದು ಗೊತ್ತಾಯಿತು. ಅದರ ಬಳಿಕವೂ  ಉದ್ದೇಶ ಪೂರ್ವಕವಾಗಿ ಅವರ ಸಾಧನೆ ಹಾಗೂ ವ್ಯಕ್ತಿತ್ವವನ್ನು ಮರೆತು ಗೇಲಿ ಮಾಡುವ ಉದ್ದೇಶದಿಂದಲೇ ಹಲವರು ವೇದಿಕೆಗೆ ಮಾತನಾಡಲು ಕರೆಯುತ್ತಿದ್ದರು ಎಂದು ಪ್ರಕಾಶ್ ರೈ ನೆನಪು ಮಾಡಿಕೊಂಡರು.

ನನ್ನ ತಾಯಿಗೂ ಮೆದುಳಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಬಳಿಕ ಇಂತಹದ್ದೇ ಸಮಸ್ಯೆ ಉಂಟಾಗಿತ್ತು. ನನ್ನ ಸಹೋದರಿಯನ್ನೇ ನೀನು ಯಾರು ಎಂದು ಪ್ರಶ್ನೆ ಮಾಡಿದ್ದರು. ನಾನು ಚಿಕ್ಕವನಿದ್ದಾಗ ನಮ್ಮ ಊರಿನಲ್ಲೂ ಮೆರೆವು ಸಮಸ್ಯೆಯಿದ್ದ ವ್ಯಕ್ತಿಯಿಂದ ಆಸ್ತಿ ಕಬಳಿಸಿ ಜೀತಕ್ಕೆ ಇಟ್ಟುಕೊಂಡಿದ್ದನ್ನು ಗಮನಿಸಿದ್ದೇನೆ ಎಂದರು. ಈ ವೇಳೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಹಿರಿಯ ನಾಗರೀಕರ ತಜ್ಞ ಡಾ. ಬೆಂಜಿಮಿನ್ ಡಾಮಿರಿಕ್, ಎಆರ್ ಡಿಎಸ್‌ಐ ಅಧ್ಯಕ್ಷೆ ಮೀರಾ ಪಟ್ಟಾಭಿರಾಮನ್, ಎಡಿಐ ಅಧ್ಯಕ್ಷೆ ಪೌಲಾ ಬರ್ಬರಿಯೊ, ವಿಚಾರ ಸಂಕಿರಣದ ಅಧ್ಯಕ್ಷೆ ಡಾ.ರಾಧಾ ಮೂರ್ತಿ ಹಾಜರಿದ್ದರು.

click me!