ಪ್ರಜ್ವಲ್‌ ಕೇಸ್‌ ವಿಚಾರಣೆ ಮುಂದೂಡಿಕೆ

By Web DeskFirst Published Sep 4, 2019, 9:40 AM IST
Highlights

ಪ್ರಜ್ವಲ್ ರೇವಣ್ಣ  ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಂದೂಡಲಾಗಿದೆ.

ಬೆಂಗಳೂರು [ಸೆ.04]:  ಕಳೆದ ಸಂಸತ್‌ ಚುನಾವಣೆಯ ವೇಳೆ ಚುನಾವಣಾಧಿಕಾರಿಗೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಸೆ.6ಕ್ಕೆ ಮುಂದೂಡಿದೆ. ಈ ಕುರಿತಂತೆ ಜಿ. ದೇವರಾಜೇಗೌಡ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿ ಮಂಗಳವಾರ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಅರ್ಜಿಯ ಈ ಹಿಂದಿನ ವಿಚಾರಣೆ ವೇಳೆ ಪ್ರಜ್ವಲ್‌ ರೇವಣ್ಣ ಅವರಿಗೆ ಕೋರ್ಟ್‌ ಸಿಬ್ಬಂದಿ ಮೂಲಕ ಸಮನ್ಸ್‌ ತಲುಪಿಸುವಂತೆ ಹಾಸನ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್‌ ಹೇಳಿತ್ತು. ಅದರಂತೆ ಮಂಗಳವಾರ ವಿಚಾರಣೆ ವೇಳೆ, ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಪ್ರಜ್ವಲ್‌ ರೇವಣ್ಣ ಅವರು ಚುನಾವಣೆ ವೇಳೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದ ನಾಮಪತ್ರದಲ್ಲಿ ನಮೂದಿಸಿದ್ದ ವಿಳಾಸಕ್ಕೆ ಕೋರ್ಟ್‌ ಸಿಬ್ಬಂದಿಯಿಂದ ಸಮನ್ಸ್‌ ಕಳಿಸಲಾಗಿತ್ತು. ಆದರೆ, ಅವರು ಆ ವಿಳಾಸದಲ್ಲಿ ಲಭ್ಯವಿಲ್ಲದ ಕಾರಣ ಸಮನ್ಸ್‌ ಜಾರಿ ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಕ್ಕೆ ಪ್ರಜ್ವಲ್‌ ರೇವಣ್ಣಗೆ ಕೋರ್ಟ್‌ ಸಮನ್ಸ್‌ ಜಾರಿ ಆಗಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಲು ಅರ್ಜಿದಾರರು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯ ಬಗ್ಗೆ ಸೆ.6ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

click me!