ತಂಬಾಕು ಸೇವಿಸಿದ್ರೆ 4 ಸಾವಿರ ದಂಡ

By Web DeskFirst Published Aug 11, 2018, 11:45 AM IST
Highlights

ತಂಬಾಕು ಹಾಗೂ ಅದರ ಉತ್ಪನ್ನಗಳನ್ನು ಸೇವನೆ ಮಾಡಿದರೆ 4 ಸಾವಿರ ದಂಡ ಬೀಳಲಿದೆ. ಇನ್ನು ಸರಾಯಿ ಸೇವನೆಗೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಹೋಗೊಂದು ನಿಯಮವನ್ನು ಬಾಗಲಕೋಟೆಯ ಕೆರೂರಿನಲ್ಲಿ ಜಾರಿ ತರಲು ತೀರ್ಮಾನ ಮಾಡಲಾಗಿದೆ. 

ಕೆರೂರ :  ಸಮಾಜಕ್ಕೆ ಆದರ್ಶವಾಗಬಲ್ಲ ಬದಲಾವಣೆ ತಮ್ಮಿಂದಲೇ ಶುರುವಾಗಲಿ ಎಂಬ ಸದುದ್ದೇಶದೊಂದಿಗೆ ಪೊಲೀಸರು ತಮ್ಮ ಠಾಣೆಯನ್ನು ಸಂಪೂರ್ಣ ಚಟಮುಕ್ತವನ್ನಾಗಿಸಲು ಸಂಕಲ್ಪ ತೊಟ್ಟಿದ್ದಾರೆ. ಈ ಬೆಳವಣಿಗೆ ನಡೆದಿರುವುದು ಬಾಗಲಕೋಟೆ ಜಿಲ್ಲೆ ಬಾದಾಮಿ ಜಿಲ್ಲೆಯ ಕೆರೂರು ಪೊಲೀಸ್‌ ಠಾಣೆಯಲ್ಲಿ. ತಮ್ಮಿಂದಲೇ ದುಶ್ಚಟಗಳ ಮೂಲೋತ್ಪಾಟನೆಯಾಗಲಿ ಎಂಬ ಈ ಠಾಣೆ ಸಿಬ್ಬಂದಿ ನಿರ್ಧಾರ ಪ್ರಶಂಸೆಗೆ ಪಾತ್ರವಾಗಿದೆ.

ಇಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಮಿಶ್ರಿತ ಪದಾರ್ಥ ಸೇವಿಸುವ ಪೊಲೀಸರಿಗೆ .4000 ದಂಡ ಮತ್ತು ಸಾರಾಯಿ ಸೇವನೆಗೆ .5000 ದಂಡ ವಿಧಿಸುವ ಪಿಎಸ್‌ಐ ಫರ್ಮಾನಿಗೆ ಅಲ್ಲಿರುವ ಎಲ್ಲ 35 ಪೊಲೀಸ್‌ ಸಿಬ್ಬಂದಿ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಪಾಲನೆಗೆ ಸೈ ಅಂದಿದ್ದಾರೆ. ಇಳಕಲ್ಲ ಮಹಾಂತ ಶ್ರೀಗಳ ಜನ್ಮದಿನವಾದ ಆ.1ರಂದು ರಾಜ್ಯಾದ್ಯಂತ ಆಚರಿಸಲಾಗುತ್ತಿರುವ ವ್ಯಸನಮುಕ್ತ ದಿನದಿಂದಲೇ ಈ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಕಾನೂನನ್ನು ಬೇರುಮಟ್ಟದಲ್ಲೇ ಜಾರಿಗೆ ತರುವ ಮುನ್ನ ತಮ್ಮಿಂದಲೇ ಆರಂಭಿಸುವ ಹೊಸ ಆಲೋಚನೆಯೊಂದು ರೂಪುತಳೆದಿದ್ದೇ ಈ ಬದಲಾವಣೆಗೆ ಕಾರಣ. ಇಂತಹ ಕಾನೂನು ಪಾಲನೆಗೆ ಪಿಎಸ್‌ಐ ಆದಿಯಾಗಿ ಅಲ್ಲಿನ ಎಲ್ಲ ಸಿಬ್ಬಂದಿ ಈಗ ಮುಂದಾಗಿದ್ದಾರೆ.

ಎಸ್‌ಐ ಇಂಗಿತಕ್ಕೆ ಸೈ ಎಂದ ಸಿಬ್ಬಂದಿ:

ಈ ವಿನೂತನ ಕಾರ್ಯಕ್ಕೆ ಮೂರ್ತ ಸ್ವರೂಪ ನೀಡಿದ್ದು ಕೆರೂರು ಪೊಲೀಸ್‌ ಠಾಣೆಯ ಪಿಎಸ್‌ಐ ಚಂದ್ರಶೇಖರ ಹೆರಕಲ್‌. ಈ ಠಾಣೆಯನ್ನು ಚಟಮುಕ್ತ ಠಾಣೆಯನ್ನಾಗಿ ಮಾಡುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಲ್ಲಿನ ಸಿಬ್ಬಂದಿಗೆ ಯಾವುದೇ ದುಶ್ಚಟಗಳು ಇಲ್ಲದಂತೆ ಮಾಡುವತ್ತ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ.

ಏನೇನು ಮಾಡುತ್ತಿದ್ದಾರೆ?:

ಕಳೆದ ಹತ್ತು ತಿಂಗಳ ಹಿಂದೆ ಈ ಠಾಣೆಗೆ ವರ್ಗವಾಗಿ ಬಂದ ಪಿಎಸ್‌ಐ ಚಂದ್ರಶೇಖರ ಹೆರಕಲ್‌ ಅವರು, ಪೊಲೀಸ್‌ ಠಾಣೆಯಲ್ಲಿ ವ್ಯಸನ ಮುಕ್ತ ದಿನಾಚರಣೆಯ ಪರಿಪೂರ್ಣ ಪಾಲನೆಗಾಗಿ ತಮ್ಮ ಸಿಬ್ಬಂದಿ ಸಭೆ ಕರೆದು ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮ ಹಾಗೂ ಕುಟುಂಬದ ಮೇಲೆ ಬೀಳುವ ಅನಗತ್ಯದ ಹಣಕಾಸು ಹೊರೆ ಕುರಿತು ವಿವರವಾಗಿ ಅರಿಕೆ ಮಾಡಿದ್ದಾರೆ. ದುಶ್ಚಟಗಳು ಹಾಗೂ ಮಾದಕ ವ್ಯಸನದಿಂದ ಆರೋಗ್ಯ ಹಾಳಾಗುವುದರ ಜೊತೆಗೆ ಸಮಾಜಕ್ಕೆ ರಕ್ಷಣೆ ಕೊಡಬೇಕಾದ ನಾವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರಬಹುದು. ಮಾತ್ರವಲ್ಲ, ಕುಟುಂಬದವರಿಗೆ ಬೇಡವಾಗಿ ವ್ಯರ್ಥ ಬದುಕು ಸಾಗಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ.

ಎಸ್‌ಐ ಚಂದ್ರಶೇಖರ್‌ ಹೆರಕಲ್‌ ಅವರು, ಈ ಹಿಂದೆ ಹೆಲ್ಮೆಟ್‌ ಕಡ್ಡಾಯ ಎಂಬ ನಿಯಮ ಪಾಲಿಸದ ತಮ್ಮ 18 ಜನ ಸಿಬ್ಬಂದಿಗೆ ತಲಾ .100ಯಂತೆ ದಂಡ ಹಾಕಿ, ಕಾನೂನು ಎಲ್ಲರಿಗೂ ಒಂದೇ ಎಂದು ಸಾರಿದ್ದರು.


ಠಾಣೆ ಅಂದರೆ ಕುಟುಂಬ. ಈ ಕುಟುಂಬ ಸದಸ್ಯರ ರಕ್ಷಣೆ ದೃಷ್ಟಿಯಿಂದ ಚಟ ಮುಕ್ತರನ್ನಾಗಿ ಮಾಡಬೇಕೆಂಬುದು ಕುಟುಂಬದ ಮುಖ್ಯಸ್ಥನಾದ ನನ್ನ ಮಹದಾಸೆಯಾಗಿದೆ. ಈ ಕಠಿಣ ನಿರ್ಧಾರಕ್ಕೆ ಸಹಕಾರ ನೀಡಿದ ಸಿಬ್ಬಂದಿಗೆ ಧನ್ಯವಾದಗಳು.

-ಚಂದ್ರಶೇಖರ ಹೆರಕಲ್‌, ಕೆರೂರು ಪೊಲೀಸ್‌ ಠಾಣೆ ಪಿಎಸ್‌ಐ


ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಅನ್ನುವಂತಾಗಬಾರದೆಂದು ಮೊದಲು ತಾವು ಪರಿಶುದ್ಧರಾಗಿ ಮತ್ತೊಬ್ಬರಿಗೆ ಬುದ್ಧಿ ಹೇಳಬೇಕೆಂಬ ಆದರ್ಶಕ್ಕೆ ಬದ್ಧರಾದ ಪಿಎಸ್‌ಐ ಹೆರಕಲ್‌ ತಮ್ಮ ಠಾಣೆ ಸಿಬ್ಬಂದಿಯ ನಡತೆ ಸುಧಾರಿಸುವ ನಿಟ್ಟಿನಲ್ಲಿ ಕೈ ಹಾಕಿದ್ದು ಶ್ಲಾಘನೀಯ. ಅದು ಇತರರಿಗೂ ಮಾದರಿಯಾಗಿದೆ.

-ರಾಘವೇಂದ್ರ ಕಲಾದಗಿ ಸಮಾಜ ಸೇವಕರು.

ಪಿಎಸ್‌ಐ ಸಾಹೇಬರ ಆದೇಶದಿಂದ ಒಂದು ಕ್ಷಣ ವಿಚಲಿತರಾದರೂ ಈಗ ಅವರ ಆದೇಶವು ನಮ್ಮನ್ನು ಸುಧಾರಿಸುವ ನಿಟ್ಟಿನಲ್ಲಿ ಒಯ್ಯುತ್ತಿದೆ. ಅವರಿಗೆ ಎಷ್ಟುಧನ್ಯವಾದ ಹೇಳಿದರೂ ಸಾಲದು.

-ಯಲ್ಲಪ್ಪ ಪೂಜಾರ, ಪಿಸಿ


ಭೀಮಸೇನ ದೇಸಾಯಿ

click me!