ಆ್ಯಂಬುಲೆನ್ಸ್'ಗೂ ಬಿಡಲಿಲ್ಲ ದಾರಿ : ನಡೆದೇ ಆಸ್ಪತ್ರೆ ಸೇರಿದ ರೋಗಿ

By suvarna Web DeskFirst Published Nov 22, 2017, 1:44 PM IST
Highlights

ಮಹಿಳಾ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಸಿಕ್ಕಿಕೊಂಡಿತ್ತು. ನಿರಂತರವಾಗಿ ಸೈರನ್ ಹೊಡೆದು ಕೊಂಡರೂ ಯಾರೂ ಜಾಗ ಬಿಡಲಿಲ್ಲ. ಪೊಲೀಸರು ಮುಖ್ಯಮಂತ್ರಿಗಳಿಗೆ ಭದ್ರತೆ ನೀಡಲು ಮುಂದಾದ ಕ್ರಮದಿಂದ ಬೇಸತ್ತ ರೋಗಿಯ ಪೋಷಕರು ಕೊನೆಗೆ ಮಹಿಳಾ ರೋಗಿಯನ್ನು ಆ್ಯಂಬುಲೆನ್ಸಿ ನಿಂದ ಕೆಳಗಿಳಿಸಿಕೊಂಡು 300 ಮೀಟರ್ ದೂರದಲ್ಲಿದ್ದ ಸಾರ್ವಜನಿಕ ಆಸ್ಪತ್ರೆವರೆಗೆ ಕಾಲ್ನಡಿಗೆಯಲ್ಲಿಯೇ ಕರೆದುಕೊಂಡು ಹೋದರು.

ನಾಗಮಂಗಲ(ನ.22): ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ಸೋಮವಾರ ಸಿಎಂ ನಾಗಮಂಗಲಕ್ಕೆ ಆಗಮಿಸಿದ್ದ ವೇಳೆಯಲ್ಲಿ ಮಹಿಳಾ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್‌'ಗೆ ಪೊಲೀಸರು ದಾರಿ ಕೊಡದ ಹಿನ್ನೆಲೆಯಲ್ಲಿ ಆ ರೋಗಿಯನ್ನು ಆ್ಯಂಬುಲೆನ್ಸ್‌'ನಿಂದ ಕೆಳಗೆ ಇಳಿಸಿ, ಕಾಲ್ನಡಿಗೆಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಈ ಕ್ರಮ ವಿರುದ್ಧ ಸಾರ್ವಜನಿಕರ ವಲಯದಲ್ಲಿ ಸಾಕಷ್ಟು ಆಕ್ರೋಷಕ್ಕೂ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನ.20ರ ಬೆಳಿಗ್ಗೆ 11.30ರ ವೇಳೆಗೆ ಹೆಲಿಕಾಪ್ಟರ್ ಮೂಲಕ ಪಟ್ಟಣದ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದರು. ನಂತರ ನೇರವಾಗಿ ಬಿ.ಎಂ.ರಸ್ತೆಯ ಪಕ್ಕದಲ್ಲಿಯೇ ಕನಕ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲು ತೆರಳಿದ್ದರು. ಈ ವೇಳೆ ಸಿಎಂಗೆ ಭದ್ರತೆ ಒದಗಿಸುವ ಸಲುವಾಗಿ ಪಟ್ಟಣದ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಹಾಗೂ ಟಿ.ಬಿ.ಬಡಾವಣೆಯ ಬಿ.ಜಿ. ಎಸ್ ವೃತ್ತದಲ್ಲಿ ಎಲ್ಲ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

Latest Videos

ನೂರಾರು ವಾಹನಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ನಿಂತಿದ್ದವು. ಮಧ್ಯದಲ್ಲಿ ಮಹಿಳಾ ರೋಗಿಯೊಬ್ಬರನ್ನು ಕರೆದುಕೊಂಡು ಬರುತ್ತಿದ್ದ ಆ್ಯಂಬುಲೆನ್ಸ್ ಸಿಕ್ಕಿಕೊಂಡಿತ್ತು. ನಿರಂತರವಾಗಿ ಸೈರನ್ ಹೊಡೆದು ಕೊಂಡರೂ ಯಾರೂ ಜಾಗ ಬಿಡಲಿಲ್ಲ. ಪೊಲೀಸರು ಮುಖ್ಯಮಂತ್ರಿಗಳಿಗೆ ಭದ್ರತೆ ನೀಡಲು ಮುಂದಾದ ಕ್ರಮದಿಂದ ಬೇಸತ್ತ ರೋಗಿಯ ಪೋಷಕರು ಕೊನೆಗೆ ಮಹಿಳಾ ರೋಗಿಯನ್ನು ಆ್ಯಂಬುಲೆನ್ಸಿ ನಿಂದ ಕೆಳಗಿಳಿಸಿಕೊಂಡು 300 ಮೀಟರ್ ದೂರದಲ್ಲಿದ್ದ ಸಾರ್ವಜನಿಕ ಆಸ್ಪತ್ರೆವರೆಗೆ ಕಾಲ್ನಡಿಗೆಯಲ್ಲಿಯೇ ಕರೆದುಕೊಂಡು ಹೋದರು.

ಈ ದೃಶ್ಯವನ್ನು ಮೊಬೈಲ್‌'ನಲ್ಲಿ ಸೆರೆಹಿಡಿದ ವ್ಯಕ್ತಿ ಸಾಮಾಜಿಕ ಜಾಲತಾಣಕ್ಕೆ ಹರಿದುಬಿಡುತ್ತಿದ್ದಂತೆ ಮುಖ್ಯಮಂತ್ರಿ ಹಾಗೂ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕವಾಗಿ ಭಾರಿ ಆಕ್ರೋಶವ್ಯಕ್ತವಾಗಿದೆ.

click me!