ಕೋಟೆ ನಾಡಿಗೆ ಖಾಕಿ ಪಡೆ ಮುತ್ತಿಗೆ

Published : Nov 08, 2017, 04:34 PM ISTUpdated : Apr 11, 2018, 12:41 PM IST
ಕೋಟೆ ನಾಡಿಗೆ ಖಾಕಿ ಪಡೆ ಮುತ್ತಿಗೆ

ಸಾರಾಂಶ

‘ಚಿತ್ರದುರ್ಗದಲ್ಲಿ ಏನು ಅನಾಹುತವಾಗಿದೆ, ಯಾಕೆ ಇಷ್ಟೊಂದು ಮಂದಿ ಪೊಲೀಸರು ಇದ್ದಾರೆ. ಅದೇಕೆ ಎಲ್ಲರನ್ನು ತಡೆದು ವಿಚಾರ ಮಾಡ್ತಾರೆ. ನಾವು ಊರೊಳಗೆ ಹೋದರೆ ಜೀವಕ್ಕೆ ಏನಾದ್ರು ಅಪಾಯವಿದೆಯೇ? ಹೋಗಬೇಕೋ ಅಥವಾ ಬೇಡವೋ ಎನ್ನುವುದು ಅರ್ಥವಾಗದಂತಾಗಿದೆ..’ ಹೊಸಪೇಟೆಯಿಂದ ಚಿತ್ರದುರ್ಗ ನಗರ ಪ್ರವೇಶಿಸುವಾಗ ಪೊಲೀಸರ ತಪಾಸಣೆಯ ಕಿರಿಕಿರಿಗೆ ರೋಸಿಹೋದ ಕಾರು ಚಾಲಕನೋರ್ವ ಆತಂಕ ವ್ಯಕ್ತಪಡಿಸಿದ ಬಗೆಯಿದು.

ಚಿತ್ರದುರ್ಗ (ನ.08): ‘ಚಿತ್ರದುರ್ಗದಲ್ಲಿ ಏನು ಅನಾಹುತವಾಗಿದೆ, ಯಾಕೆ ಇಷ್ಟೊಂದು ಮಂದಿ ಪೊಲೀಸರು ಇದ್ದಾರೆ. ಅದೇಕೆ ಎಲ್ಲರನ್ನು ತಡೆದು ವಿಚಾರ ಮಾಡ್ತಾರೆ. ನಾವು ಊರೊಳಗೆ ಹೋದರೆ ಜೀವಕ್ಕೆ ಏನಾದ್ರು ಅಪಾಯವಿದೆಯೇ? ಹೋಗಬೇಕೋ ಅಥವಾ ಬೇಡವೋ ಎನ್ನುವುದು ಅರ್ಥವಾಗದಂತಾಗಿದೆ..’ ಹೊಸಪೇಟೆಯಿಂದ ಚಿತ್ರದುರ್ಗ ನಗರ ಪ್ರವೇಶಿಸುವಾಗ ಪೊಲೀಸರ ತಪಾಸಣೆಯ ಕಿರಿಕಿರಿಗೆ ರೋಸಿಹೋದ ಕಾರು ಚಾಲಕನೋರ್ವ ಆತಂಕ ವ್ಯಕ್ತಪಡಿಸಿದ ಬಗೆಯಿದು.

ಇದಕ್ಕೆ ಕಾರಣವೂ ಇತ್ತು. ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿರೋಧ  ವ್ಯಕ್ತಪಡಿಸಿ ಬಿಜೆಪಿ ಮಂಗಳವಾರ ಹಮ್ಮಿಕೊಂಡ ವಿಚಾರ ಸಂಕಿರಣ ಹಾಗೂ ಮೌನ ಮೆರವಣಿಗೆಗೆ ಪ್ರತಿಯಾಗಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ದೃಷ್ಟಿಯಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾದ್ಯಂತ ನ.7 ರಿಂದ 10 ರವರೆಗೆ ನಿಷೇಧಾಜ್ಞೆ  ಜಾರಿಗೊಳಿಸಿ ಆದೇಶ ಹೊರಡಿಸಿದ ಜಿಲ್ಲಾಡಳಿತ ನಾಲ್ಕು ಜಿಲ್ಲೆಗಳಿಂದ ಅಪಾರ ಪ್ರಮಾಣದಲ್ಲಿ ಪೊಲೀಸರನ್ನು ಕರೆಯಿಸಿ ನಾಕಾ ಬಂದಿ ಹಾಕಿದೆ. ಹಾಗಾಗಿ, ನಗರದ ಯಾವ ಮೂಲೆಯಲ್ಲಿ ನೋಡಿದರೂ ಪೊಲೀಸರೇ ಕಂಡುಬಂದರು. ಚಳ್ಳಕೆರೆ ಟೋಲ್‌ಗೇಟ್, ಎಸ್‌ಜಿಎಂಐಟಿ, ಹೊಸಪೇಟೆ ರಸ್ತೆ ತಿರುವಿನಲ್ಲಿ ಬ್ಯಾರಿಕೇಡ್'ಗಳ ನಿರ್ಮಿಸಿ ಹೊರ ಜಿಲ್ಲೆಗಳ ರಿಜಿಸ್ಟ್ರೇಷನ್ ಹೊಂದಿರುವ ವಹಾನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಯಿತು. ಸಾಲದೆಂಬಂತೆ ನಗರದ ಹೊರ ವಲಯದ ಮಾದಾರ ಚೆನ್ನಯ್ಯ ಗುರುಪೀಠ, ಬಿಜೆಪಿ ವಿಚಾರ ಸಂಕಿರಣ ನಡೆಸಲು ಉದ್ದೇಶಿಸಿದ್ದ  ಜೆ.ಜೆ. ಸಮುದಾಯ ಭವನಗಳಿಗೂ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಬೆಳಗ್ಗಿನಿಂದ  ಸಂಜೆಯವರೆಗೂ ಬೀಡುಬಿಟ್ಟು ಯಾವುದೇ ಕಾರ್ಯಕ್ರಮ ನಡೆಸಲು ಬಿಜೆಪಿಗೆ ಅವಕಾಶ ನೀಡಲಿಲ್ಲ.

ಮಂಗಳೂರಿನ ಲೇಖಕ ರಹೀಂ ಉಚ್ಚಿಲ, ಸಾಮಾಜಿಕ ಮತ್ತು ರಾಜಕೀಯ ವಿಶ್ಲೇಷಕ ರಾಬರ್ಟ್ ರೊಸಾರಿಯೋ, ಕಾರ್ಕಳ ಶಾಸಕ ಸುನೀಲ್‌ಕುಮಾರ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಣ್ಣು ತಪ್ಪಿಸಿ ಊರಿನೊಳಗೆ ನುಸುಳಿ ಬಿಟ್ಟಾರು ಎಂಬ ಕಾರಣಕ್ಕೆ ನಾಲ್ಕು ಕಡೆಯಲ್ಲಿಯೂ ಪೊಲೀಸ್ ನಾಕಾಬಂಧಿ ಹಾಕಲಾಗಿತ್ತು. ಅಲ್ಲಲ್ಲಿ ಟೆಂಟ್‌ಗಳನ್ನು ಕಟ್ಟಿಕೊಂಡು ಪೊಲೀಸರು ಕಾವಲು ಕಾಯುತ್ತಿದ್ದುದು ಕಂಡುಬಂದಿತು. ನಿಷೇಧಾಜ್ಞೆ  ಜಾರಿ ಹಿನ್ನೆಲೆಯಲ್ಲಿ ಮೌನ ಮೆರವಣಿಗೆಗೆ ಅವಕಾಶ ನೀಡದಿರಲು ಪೊಲೀಸರು ನಿರಾಕರಿಸಿದ್ದರಿಂದ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂಸದ ಪ್ರತಾಪ ಸಿಂಹ ಪತ್ರಿಕಾಗೋಷ್ಟಿಗಷ್ಟೇ ಸೀಮಿತಗೊಳ್ಳಬೇಕಾಯಿತು. ಮಾದಾರ ಚೆನ್ನಯ್ಯ ಗುರುಪೀಠದಿಂದ ನೇರವಾಗಿ ಪತ್ರಿಕಾ ಭವನಕ್ಕೆ ಪ್ರತಾಪ ಸಿಂಹ ಆಗಮಿಸಿದರು. ಆಗ ಪೊಲೀಸರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಹಂತದಲ್ಲಿ ಎಸ್ಪಿ ಹಾಗೂ ಪ್ರತಾಪ ಸಿಂಹ ಅವರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಟಿಪ್ಪು ಜಯಂತಿ ವಿರೋಧಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿ‘ಟನೆ ನಡೆಯುತ್ತಿವೆ. ಎಲ್ಲಿಯೂ ಈ ವಾತಾವರಣವಿಲ್ಲ. ಪ್ರತಿಭಟನೆಗೆ ಅಡ್ಡಿಪಡಿಸಲು ನೀವ್ಯಾರು ಎಂದು ಪ್ರಶ್ನಿಸಿದರು. ಬಿಜೆಪಿ ಕಾರ್ಯಕರ್ತರಿಗಿಂತ ಪೊಲೀಸರೇ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಮೌನ ಮೆರವಣಿಗೆ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಪಕ್ಷ ಮೊದಲೇ ಹೇಳಿಕೆ ನೀಡಿದೆ. ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದಾದರೆ ಇಲ್ಲೇನು ಪ್ರಜಾಪ್ರಭುತ್ವ ಇಲ್ಲವೆ? ಪ್ರತಿಭಟನೆಗಳನ್ನು ತಡೆಯಲು ಉದ್ದೇಶಪೂರ್ವಕವಾಗಿಯೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಾಗ್ವಾದದ ನಂತರ ಪತ್ರಿಕಾಗೋಷ್ಠಿಗೆ ಮಾತ್ರ ಅವಕಾಶ ಮಾಡಿಕೊಡಲಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು