ನಕಲಿ ಅಂಕಪಟ್ಟಿ ಜಾಲ; ತನಿಖೆ ಚುರುಕುಗೊಳಿಸಿದ ಪೊಲೀಸರು

By Suvarna Web DeskFirst Published Jul 27, 2017, 10:29 PM IST
Highlights

ನಕಲಿ ಅಂಕಪಟ್ಟಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲ ಮೈಸೂರಿನಲ್ಲಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂವರು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಮೈಸೂರು (ಜು.27): ನಕಲಿ ಅಂಕಪಟ್ಟಿ ಸೃಷ್ಟಿಸಿ ನಿರುದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲ ಮೈಸೂರಿನಲ್ಲಿ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂವರು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಸಹಾಯಕ ಕುಲಸಚಿವ ಸಿದ್ದರಾಜು, ಅಂಕಪಟ್ಟಿ ಸಿದ್ಧಪಡಿಸುವ ಖಾಸಗಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ವೇಣು ಹಾಗೂ ಹಂಗಾಮಿ ನೌಕರ ಶಿವಣ್ಣ ಎಂಬವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ನಕಲಿ ಅಂಕಪಟ್ಟಿ ಜಾಲದ ಪ್ರಮುಖ ಆರೋಪಿ ಕರ್ನಾಟಕ ರಾಜ್ಯ ಮುಕ್ತ ವಿವಿ ಹಂಗಾಮಿ ನೌಕರ ಪ್ರಜ್ವಲ್ ಸೇರಿ ಸಾಗರ್, ಕಿಶನ್, ಮೆನನ್ ಮತ್ತು ಯಶಸ್ವಿನಿ ಎಂಬುವರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಮುಖ ಆರೋಪಿ ಪ್ರಜ್ವಲ್ ನೀಡಿದ ಮಾಹಿತಿ ಮೇರೆಗೆ ರಾಜ್ಯ ಮುಕ್ತ ವಿವಿ ಮೂವರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಷ್ಟು ಮುಕ್ತ ವಿವಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೂ ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
 
ಅಧ್ಯಾಪಕರ ಸಮಿತಿ ರಚನೆ: ನಕಲಿ ಅಂಕಪಟ್ಟಿ ಜಾಲಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ ಬೆನ್ನಲ್ಲೇ ರಾಜ್ಯ ಮುಕ್ತ ವಿವಿ ಮೌಲ್ಯಮಾಪನ ಕುಲಸಚಿವರು ಅಂಕಪಟ್ಟಿ ಪರಿಶೀಲಿಸಲು ೧೨ ಮಂದಿ ಅಧ್ಯಾಪಕರ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ಖಾಸಗಿ ಸಂಸ್ಥೆಯು ಮುದ್ರಿಸಿ ನೀಡಿದ ಅಂಕಪಟ್ಟಿಗಳ ಸಾಚಾತನ ಪರಿಶೀಲಿಸಿ ವರದಿ ಸಲ್ಲಿಸಲಿದೆ. ಈ ಎಲ್ಲ ಬೆಳವಣಿಗೆ ನಡುವೆ ಮುಕ್ತ ವಿವಿ ಕುಲಪತಿ ಪ್ರೊ. ಶಿವಲಿಂಗಯ್ಯ ಅವರು ದೀರ್ಘ ರಜೆ ಮೇಲೆ ತೆರಳಿದ್ದಾರೆ.
click me!