
ಬೆಂಗಳೂರು (ಜು. 10): ಮಹಾ ಮೋಸಗಾರ ಮಹಮ್ಮದ್ ಮನ್ಸೂರ್ ಖಾನ್‌ನಿಂದ ‘ಫಲಾನುಭವಿ’ಗಳಾದ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ಎಸ್‌ಐಟಿ ಬಲೆಗೆ ಬಿದ್ದ ಬೆನ್ನಲ್ಲೇ ಈಗ ಹಿರಿಯ ಐಪಿಎಸ್ ಅಧಿಕಾರಿ ಸೇರಿ ಕೆಲ ಪೊಲೀಸರಲ್ಲಿ ನಡುಕ ಶುರುವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಬೆಂಗಳೂರು ಪೂರ್ವ ವಿಭಾಗದಲ್ಲಿ ಕಾರ್ಯನಿರ್ವಹಿಸುವಾಗ ಕೆಲ ಪೊಲೀಸರು, ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಐಎಂಎ ಮಾಲಿಕ ಮಹಮ್ಮದ್ ಮನ್ಸೂರ್ ಖಾನ್ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದರು. ಈ ಖಾಕಿ ಸ್ನೇಹವನ್ನು ತನ್ನ ಅಕ್ರಮ ವ್ಯವಹಾರಕ್ಕೆ ರಕ್ಷಣಾ ಬೇಲಿ ಮಾಡಿಕೊಂಡಿದ್ದ ಮನ್ಸೂರ್, ಇದಕ್ಕೆ ಪ್ರತಿಯಾಗಿ ಪೊಲೀಸರಿಗೆ ‘ಕಾಣಿಕೆ’ ಸಲ್ಲಿಸಿದ್ದ ಎನ್ನಲಾಗುತ್ತಿದೆ.
ಅದರಲ್ಲೂ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮನ್ಸೂರ್ ಸಂಬಂಧವು ಇಲಾಖೆಗೆ ಮುಜುಗರ ತಂದಿತ್ತು. ಆ ಅಧಿಕಾರಿಯೇ ಮುತುವರ್ಜಿವಹಿಸಿ ಮನ್ಸೂರ್‌ಗೆ ಬಂದೂಕಿನ ಪರವಾನಿಗೆ ಕೊಡಿಸಿದ್ದರು. ಹಬ್ಬ-ಹರಿದಿನಗಳು ಮಾತ್ರವಲ್ಲ ಕಾಲಾನುಕಾಲಕ್ಕೆ ಪೊಲೀಸರಿಗೆ ಚಿನ್ನ ಮತ್ತು ನಗದು ರೂಪದಲ್ಲಿ ಮನ್ಸೂರ್‌ನಿಂದ ಕಾಣಿಕೆ ಸಂದಾಯವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಈ ವ್ಯವಹಾರದ ಕುರಿತು ಮಾಹಿತಿ ಸಂಗ್ರಹಿಸಿರುವ ಎಸ್‌ಐಟಿ ಅಧಿಕಾರಿಗಳು, ಕೆಲ ಪೊಲೀಸರಿಗೂ ತನಿಖೆ ಬಿಸಿ ಮುಟ್ಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
90 ಲಕ್ಷ ಮೌಲ್ಯದ ವಸ್ತು ಜಪ್ತಿ:
ಶಿವಾಜಿನಗರದ ಸೆಫ್ಟಿಂಗ್ ರಸ್ತೆಯಲ್ಲಿರುವ ಐಎಂಎ ಸಂಸ್ಥೆಯ ಒಡೆತನದ ಗಟ್ಟಿಚಿನ್ನ ಮತ್ತು ಬೆಳ್ಳಿ ಸಂಸ್ಕರಣಾ ಕೇಂದ್ರದ ಮೇಲೆ ಮಂಗಳವಾರ ದಾಳಿ ನಡೆಸಿ ಎಸ್‌ಐಟಿ ಅಧಿಕಾರಿಗಳು, .71.39 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ .18.16 ಲಕ್ಷ ನಗದು ಸೇರಿ ಒಟ್ಟು .90 ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.