
ಬೆಂಗಳೂರು (ಸೆ.18): ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರ ಬದಲಾವಣೆಯ ಸುದ್ದಿಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತಷ್ಟು ರಾಜ್ಯ ನಾಯಕರ ಕ್ಷೇತ್ರಗಳು ಕೂಡಾ ಬದಲಾವಣೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ ನವಂಬರ್ನಿಂದಲೇ ಪಕ್ಷದ ಪ್ರಚಾರಕ್ಕೆ ರಂಗು ನೀಡಲು ಬಿಜೆಪಿ ನಿರ್ಧರಿಸಿದ್ದು, ನವೆಂಬರ್ 2ರಂದು ಪ್ರಧಾನಿ ಮೋದಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ಕ್ಷೇತ್ರ ಬಿಟ್ಟು ಹೊರಡಲಿದ್ದಾರಾ ಇನ್ನಷ್ಟು ಬಿಜೆಪಿ ನಾಯಕರು?
1983ರಿಂದ ಕೈ ಹಿಡಿದಿದ್ದ ಶಿಕಾರಿಪುರವನ್ನು ಬಿಟ್ಟು ಉತ್ತರ ಕರ್ನಾಟಕದತ್ತ ತೆರಳುವಂತೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದೆ. ಆದರೆ ಈ ನಿರ್ದೇಶನ ರಾಜ್ಯ ಬಿಜೆಪಿಯ ಇನ್ನಷ್ಟು ನಾಯಕರಿಗೆ ಅನ್ವಯವಾಗುವ ಸಾಧ್ಯತೆಗಳಿವೆ. ತಮ್ಮ ಕ್ಷೇತ್ರದಾಚೆಗೂ ವರ್ಚಸ್ಸು ಹೊಂದಿರುವ ಹಲವು ನಾಯಕರನ್ನು 2018ರಲ್ಲಿ ಬೇರೆ ಕ್ಷೇತ್ರಗಳಿಂದ ಕಣಕ್ಕಿಳಿಸುವ ಬಗ್ಗೆ ಕೇಂದ್ರೀಯ ಬಿಜೆಪಿ ಮಟ್ಟದಲ್ಲಿ ಚರ್ಚೆಯಾಗಿದ್ದು, ಒಬ್ಬ ನಾಯಕನಿಂದ ಎರಡು ಕ್ಷೇತ್ರ ಗಳಿಸಿಕೊಳ್ಳುವ ಗೇಮ್ ಪ್ಲಾನ್ ಅನ್ನು ಬಿಜೆಪಿ ಹೈಕಮಾಂಡ್ ಸಿದ್ಧಪಡಿಸಿದೆ. ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಿಂದ ಕೊಪ್ಪಳ, ವಿಧಾನಸಭೆ ವಿಪಕ್ಷ ಉಪನಾಯಕ ಪದ್ಮನಾಭನಗರದಿಂದ ರಾಜರಾಜೇಶ್ವರಿನಗರ ಅಥವಾ ಚನ್ನಪಟ್ಟಣ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಿಂದ ಬೇಲೂರು ಅಥವಾ ಹಾಸನ ಮತ್ತು ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಗೋವಿಂದರಾಜನಗರದಿಂದ ಹನೂರು ಅಥವಾ ಗುಂಡ್ಲುಪೇಟೆಯಿಂದ ಸ್ಫರ್ಧೆ ಮಾಡುವ ಸಾಧ್ಯತೆಗಳಿವೆ. ಇವರಲ್ಲದೇ ಇನ್ನಷ್ಟು ನಾಯಕರ ಕ್ಷೇತ್ರಗಳು ಕೂಡಾ ಬದಲಾಗಲಿವೆ ಎನ್ನಲಾಗುತ್ತಿದೆ.
ನವಂಬರ್ನಿಂದಲೇ ಮೋದಿಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ
ಈ ಮಧ್ಯೆ ಫೆಬ್ರವರಿಯಲ್ಲಿ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನವಂಬರ್ನಿಂದಲೇ ರಾಜ್ಯದಲ್ಲಿ ಪ್ರಚಾರದ ರಂಗು ಏರಿಸಲು ಕೇಂದ್ರೀಯ ಬಿಜೆಪಿ ನಿರ್ಧರಿಸಿದೆ. ನವೆಂಬರ್ 2ರಂದು ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವತ್ತೇ ಪರಿವರ್ತನಾ ರ್ಯಾಲಿಯ ಸಮಯದಲ್ಲೇ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಮೋದಿ ಕೈಯಲ್ಲಿ ಚಾಲನೆ ಕೊಡಿಸಲು ಬಿಜೆಪಿ ಹೈಕಮಾಂಡ್ ವೇಳಾಪಟ್ಟಿ ಸಿದ್ದಪಡಿಸಿದೆ. ಒಟ್ಟು 120 ಬೃಹತ್ ರ್ಯಾಲಿಗಳನ್ನು ಆಯೋಜಿಸಲು ಬಿಜೆಪಿ ಚಿಂತಿಸಿದ್ದು, 25 ರ್ಯಾಲಿಗಳಲ್ಲಿ ಮೋದಿ ಅವರಿಂದ ಭಾಷಣ ಮಾಡಿಸಲು ಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.