
ನವದೆಹಲಿ(ನ.27): ‘ಪದ್ಮಾವತಿ’ ಸಿನಿಮಾದ ವಿರುದ್ಧ ಉತ್ತರ ಭಾರತ ದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಹಾಗೂ ನಟಿ ದೀಪಿಕಾ ಪಡುಕೋಣೆ ಅವರ ಶಿರಚ್ಛೇದಕ್ಕೆ ಕರೆಗಳು ಕೇಳಿಬಂದ ಬೆನ್ನಲ್ಲೇ, ‘ಯಾರನ್ನೇ ಆಗಲಿ, ಯಾವುದೇ ರೀತಿಯಲ್ಲೂ ಹಿಂಸಿ ಸಬಾರದು ಎಂಬ ಸಂದೇಶವನ್ನು ನಮ್ಮ ಸಂವಿಧಾನ ನೀಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ 38ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಅವರು, ಪದ್ಮಾವತಿ ಸಿನಿಮಾ ಕುರಿತು ನೇರವಾಗಿ ಪ್ರಸ್ತಾಪ ಮಾಡಲಿಲ್ಲ. ಆದರೆ ಅವರ ಹೇಳಿಕೆಗಳು ಪರೋಕ್ಷವಾಗಿ ಪದ್ಮಾವತಿ ಚಿತ್ರ ವಿರೋಧಿಸಿ ನಡೆದ ಹಿಂಸಾಚಾರವನ್ನೇ ಉದ್ದೇಶಿಸಿ ಹೇಳಿದ್ದು ಎಂದು ವಿಶ್ಲೇಷಿಸಲಾಗಿದೆ.
‘1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಜ.26ರಂದು ಅಳವಡಿಸಿಕೊಳ್ಳಲಾಯಿತು. ಸರ್ವರಿಗೂ ಸಮಾನತೆ ಹಾಗೂ ಸರ್ವರ ಪರ ಸಂವೇದನೆ ನಮ್ಮ ಸಂವಿಧಾನದ ವಿಶಿಷ್ಟ ಗುಣಲಕ್ಷಣಗಳು. ಪ್ರತಿಯೊಬ್ಬ ನಾಗರಿಕರಿಗೂ ಮೂಲಭೂತ ಹಕ್ಕನ್ನು ಅದು ಖಾತ್ರಿಗೊಳಿಸುತ್ತದೆ. ಆ ಹಕ್ಕನ್ನು ರಕ್ಷಿಸುವುದರ ಜತೆ, ಹಿತಗಳನ್ನು ಕಾಪಾಡುತ್ತದೆ. ನಮ್ಮ ಸಂವಿಧಾನಕ್ಕೆ ಚಾಚೂತಪ್ಪದೆ ಬದ್ಧರಾಗಿರುವುದು ನಮ್ಮ ಕರ್ತವ್ಯ. ಸಂವಿಧಾನದ ಪ್ರಕಾರವೇ ನಾಗರಿಕರು ಹಾಗೂ ಆಡಳಿತಗಾರರು ನಡೆದು ಕೊಳ್ಳಬೇಕು. ಯಾರೊಬ್ಬರನ್ನೂ ಯಾವುದೇ ರೀತಿಯಲ್ಲೂ ಹಿಂಸಿಸಬಾರದು ಎಂಬ ಸಂದೇಶವನ್ನು ನಮ್ಮ ಸಂವಿಧಾನ ನೀಡುತ್ತದೆ’ ಎಂದು ಹೇಳಿದರು.
ಉಗ್ರರ ವಿರುದ್ಧ ಒಗ್ಗಟ್ಟು ಇರಲಿ
9 ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಸಾರ್ವಜನಿಕರನ್ನು ಇದೇ ವೇಳೆ ಮೋದಿ ಸ್ಮರಿಸಿದರು. ಭಯೋತ್ಪಾದನೆ ಎಂಬುದು ಪ್ರತಿನಿತ್ಯ ಜಾಗತಿಕ ಬೆದರಿಕೆಯಾಗಿದೆ. ಅದರ ವಿರುದ್ಧ ಒಗ್ಗೂಡಿ ಹೋರಾಡಬೇಕು ಎಂದು ಕರೆ ನೀಡಿದರು. ಕೆಲವು ವರ್ಷಗಳ ಹಿಂದೆ ಭಯೋತ್ಪಾದನೆಯ ಬೆದರಿಕೆಗಳ ಬಗ್ಗೆ ಭಾರತ ಮಾತನಾಡುತ್ತಿದ್ದಾಗ, ಹಲವು ದೇಶಗಳು ಅದನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಆದರೆ ಈಗ ಭಯೋ ತ್ಪಾದನೆ ಎಂಬುದು ವಿಶ್ವದ ಪ್ರತಿ ದೇಶ, ಸರ್ಕಾರಗಳ ಬಾಗಿಲು ಬಡಿಯುತ್ತಿದೆ. ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು, ಪ್ರಜಾಸತ್ತೆಯಲ್ಲಿ ವಿಶ್ವಾಸವಿಟ್ಟಿರುವ ಸರ್ಕಾರಗಳು ಕೂಡ ಅದನ್ನು ಅತಿದೊಡ್ಡ ಸವಾಲುಗಳಲ್ಲಿ ಒಂದು ಎಂದು ಪರಿಗಣಿ ಸಿವೆ. ಭಯೋತ್ಪಾದನೆ ಎಂಬುದು ವಿಶ್ವಾದ್ಯಂತ ಮಾನವೀಯ ತೆಗೇ ಬೆದರಿಕೆಯೊಡ್ಡಿದೆ ಎಂದು ಹೇಳಿದರು. ನ.26 ಅನ್ನು ಸಂವಿಧಾನ ದಿನ ಎಂದು
ಆಚರಣೆ ಮಾಡುತ್ತೇವೆ. ಆದರೆ ಒಂಬತ್ತು ವರ್ಷಗಳ ಹಿಂದೆ ಇದೇ ದಿನ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ಮಾಡಿದ್ದರು ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಡಿ.5ರಂದು ವಿಶ್ವ ಮಣ್ಣು ದಿನ ಇದೆ. ಯೂರಿಯಾ ಬಳಕೆಯಿಂದ ಮಣ್ಣಿನ ಮೇಲೆ ಗಂಭೀರ ಹಾನಿ ಮಾಡಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.