
ಬೆಂಗಳೂರು (ನ.06): ನೋಟ್' ಬ್ಯಾನ್ ಆದ ನಂತರ ಆರಂಭವಾದ ಐಟಿ ದಾಳಿಗಳ ಸರಣಿ ಇನ್ನೂ ನಿಂತಿಲ್ಲ. ಕಾಂಗ್ರೆಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿದೆ ಅಂತ ಕಾಂಗ್ರೆಸ್ ಆರೋಪ ಮಾಡುತ್ತಲೇ ಇದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಹೆಣೆಯಲು ಮೋದಿ ಐಟಿ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ. ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದ ನಂತರ ಮುಂದಿನ ಟಾರ್ಗೆಟ್ ಯಾರು ಅನ್ನೋ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿದೆ. ತನ್ನನ್ನೇ ಟಾರ್ಗೆಟ್ ಮಾಡಿದ್ದಾರೆ ಅನ್ನೋ ಆತಂಕ ಸಚಿವ ಎಂಬಿ ಪಾಟೀಲ್ ಅವರದ್ದು..
ಮೋದಿ ಕಡೆಗೆ ಬೊಟ್ಟು ಮಾಡಿದ ಎಂ.ಬಿ ಪಾಟೀಲ್..!
ರಾಜ್ಯ ಕಾಂಗ್ರೆಸ್ ಮುಖಂಡರುಗಳು ತಮ್ಮ ಮನೆಯ ಮೇಲೆ ಯಾವಾಗ ದಾಳಿ ನಡೆಯುತ್ತದೆಯೋ ಎಂಬ ಭಯದಲ್ಲಿದ್ದಾರೆ. ಇದೇ ಭಯದಲ್ಲಿರುವ ಸಚಿವ ಎಂಬಿ ಪಾಟೀಲ್ ತಮ್ಮ ಆಕ್ರೋಶವನ್ನು ಇಂದು ಹೊರ ಹಾಕಿದ್ದಾರೆ. ಆದಾಯ ತೆರಿಗೆ ಇಲಾಖೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ. ನನ್ನ ಫೋನನ್ನು ಹಲವು ದಿನಗಳಿಂದ ಟ್ಯಾಪ್ ಮಾಡಲಾಗುತ್ತಿದೆ ಎಂದು ಎಂಬಿ ಪಾಟೀಲ್ ಆರೋಪಿಸಿದ್ದಾರೆ. ನನ್ನ ಪತ್ನಿ, ಪುತ್ರ ಮತ್ತು ವಕೀಲರ ಫೋನನ್ನೂ ಟ್ಯಾಪ್ ಮಾಡಲಾಗುತ್ತಿದೆ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವೇ ನನ್ನ ದೂರವಾಣಿಯನ್ನು ಕದ್ದಾಲಿಸುತ್ತಿದೆ. ಈ ಬಗ್ಗೆ ನಾನು ಶೀಘ್ರದಲ್ಲೇ ದೂರು ಸಲ್ಲಿಸುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಐಟಿ ಬಳಸಿಕೊಂಡು ಡಿಕೆಶಿ ಪ್ರಭಾವ ಕುಗ್ಗಿಸಲು ಯತ್ನ..?
ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಕಜಾನೆ ಅಂತಲೇ ಪರಿಗಣಿತವಾಗಿರುವ ಡಿಕೆ ಶಿವಕುಮಾರ್ ಅವರ ಪ್ರಭಾವ ಕುಗ್ಗಿಸಲು ಐಟಿ ಇಲಾಖೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳಿವೆ. ಡಿಕೆಶಿ ಮನೆ ಮೇಲೆ ದಾಳಿ ನಡೆದ ನಂತರ ಏಳನೇ ಬಾರಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಆದ್ರೆ ಈ ಬಾರಿ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗ್ಬೇಕು ಎಂದು ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು. ಇದ್ರ ಜೊತೆಗೆ ಲೆಕ್ಕ ಪರಿಶೋಧಕರನ್ನು ಕರೆತರದಂತೆ ಷರತ್ತು ವಿಧಿಸಿತ್ತು. ಐಟಿ ದಾಳಿ ನಂತರ ಇದುವರೆಗೆ ಏಳು ಬಾರಿ ಡಿಕೆ ಶಿವಕುಮಾರ್ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪದೇ ಪದೇ ವಿಚಾರಣೆಗೆ ಕರೆಸಿ ಹೈರಾಣ ಮಾಡುವ ಮೂಲಕ ಅವರ ಪ್ರಭಾವ ಕುಗ್ಗಿಸುವ ತಂತ್ರ ಹೆಣೆಯಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಚುನಾವಣೆಗೆ ಬಿಜೆಪಿ ಪಾಲಿಗೆ ಐಟಿ ಅಸ್ತ್ರ..?
ಕಾಂಗ್ರೆಸ್ನಲ್ಲಿ ಟ್ರಬಲ್ ಶೂಟರ್ಗಳು ಅಂತ ಯಾರ್ಯಾರಿದ್ದಾರೋ ಅವರೆಲ್ಲರನ್ನೂ ಟಾರ್ಗೆಟ್ ಮಾಡಿಕೊಂಡು ಕಾಂಗ್ರೆಸ್ ಅನ್ನು ಹೆಣೆಯುವ ಪ್ಲಾನ್ ಅನ್ನು ಮೋದಿ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದಲ್ಲಿನ ಇವತ್ತಿನ ಪರಿಸ್ಥಿತಿ ನೋಡಿದ್ರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಾಗುತ್ತಿದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿಯೇ ಮೋದಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಐಟಿ ಇಲಾಖೆಯನ್ನ ಅಸ್ತ್ರ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಯಾಕಂದ್ರೆ ನೋಟ್ ಬ್ಯಾನ್ ನಂತರ ನಡೆದ ಬಹುತೇಕ ದಾಳಿಗಳೂ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆಯೇ ನಡೆದಿದ್ದವು. ಹೀಗಾಗಿಯೇ ಕಾಂಗ್ರೆಸ್ ಪಾಲಿಗೆ ಸಂಪತ್ತಿನ ವ್ಯಕ್ತಿಗಳು ಅಂತ ಯಾರಿದ್ದಾರೆ ಅವರೆಲ್ಲರಿಗೂ ಈಗ ಐಟಿ ಗುಮ್ಮ ಕಾಡುತ್ತಿದೆ. ಮೋದಿ ಸರ್ಕಾರ ಐಟಿ ಇಲಾಖೆಯನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.