ಪ್ರಧಾನಿ ಮೋದಿ ಭಾಷಣ ಆಲಿಸಲು ಸೇರಲಿದ್ದಾಋಎ 50 ಸಾವಿರ ಮಂದಿ| ಇದೇ ಸೆಪ್ಟೆಂಬರ್’ನಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ| ಹೋಸ್ಟನ್’ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ| ‘ಹೌಡಿ ಮೋದಿ’ ಹೆಸರಿನ ಸಮಾರಂಭಕ್ಕೆ 50 ಸಾವಿರಕ್ಕೂ ಅಧಿಕ ನಿವಾಸಿ ಭಾರತೀಯರು|
ಟೆಕ್ಸಾಸ್(ಜು.27): ತಮ್ಮ ವಿದೇಶಿ ಯಾತ್ರೆಗಳಲ್ಲಿ ಭಾರತೀಯ ಸಂಜಾತರನ್ನು ಭೇಟಿಯಾಗುವುದು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯ ಭಾಗ. ಭಾರತೀಯ ಸಂಜಾತರ ಮೂಲಕವೇ ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸುವುದು ಮೋದಿ ಅವರು ಕಂಡುಕೊಂಡ ನೂತನ ಮಾರ್ಗ.
ಅದರಂತೆ ಎರಡನೇ ಬಾರಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ಈ ಬಾರಿಯೂ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದೇ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಿದ್ದು, ಹೋಸ್ಟನ್’ನ ಐತಿಹಾಸಿಕ NRG ಸ್ಟೇಡಿಯಂನಲ್ಲಿ ಸೆ.22ರಂದು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಮೋದಿ ಭಾಷಣ ಸಮಾರಂಭದಲ್ಲಿ ಸುಮಾರು 50 ಸಾವಿರ ಅನಿವಾಸಿ ಭಾರತೀಯರು ಭಾಗವಹಿಸುತ್ತಿದ್ದು, ಈ ಭಾಷಣ ಐತಿಹಾಸಿಕವಾಗಿರಲಿದೆ ಎಂದು ಆಯೋಜಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾರ್ಯಕ್ರಮ ಆಯೋಜಕ ಜುಗಲ್ ಮಲಾನಿ, ‘ಹೌಡಿ ಮೋದಿ’ ಎಂಬ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮೋಧಿ ಭಾಷಣ ಸಮಾರಂಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.