ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ನೀತಿ ಆಯೋಗದ ಸಭೆಯಲ್ಲಿ ಕೇಂದ್ರ ಸರ್ಕಾರದ ದೂರದೃಷ್ಟಿಯನ್ನು ಮೋದಿ ಬಿಚ್ಚಿಟ್ಟರು. ಆರ್ಥಿಕತೆ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಒತ್ತಿ ಹೇಳಿದರು. ರಫ್ತಿಗೆ ಉತ್ತೇಜನ ನೀಡುವಂತೆ ಕರೆ ನೀಡಿದರು.
ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಎರಡನೇ ಅವಧಿಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ನೀತಿ ಆಯೋಗದ ಆಡಳಿತ ಮಂಡಳಿಯ 5ನೇ ಸಭೆ ನಡೆಸಿದರು. ಬಹುತೇಕ ಎಲ್ಲ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಕೇಂದ್ರ ಸರ್ಕಾರದ ದೂರದೃಷ್ಟಿಯನ್ನು ಮೋದಿ ಬಿಚ್ಚಿಟ್ಟರು. ಆರ್ಥಿಕತೆ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಒತ್ತಿ ಹೇಳಿದರು. ರಫ್ತಿಗೆ ಉತ್ತೇಜನ ನೀಡುವಂತೆ ಕರೆ ನೀಡಿದರು.
ಮೊದಲಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಅಮೆರಿಕನ್ ಡಾಲರ್ (345 ಲಕ್ಷ ಕೋಟಿ ರು.) ಸಾಮರ್ಥ್ಯದ ಆರ್ಥಿಕ ಶಕ್ತಿಯನ್ನಾಗಿ ರೂಪಿಸಬೇಕಿದೆ. ಇದು ಸವಾಲಿನಂತೆ ಕಂಡರೂ ನಿಮ್ಮೆಲ್ಲರ ಸಹಕಾರವಿದ್ದರೆ ಖಂಡಿತವಾಗಿಯೂ ಸಾಧ್ಯವಿದೆ ಎಂದು ಹೇಳಿದರು. ರಾಜ್ಯಗಳು ತಮ್ಮ ಪ್ರಮುಖ ಸಾಮರ್ಥ್ಯ ಗುರುತಿಸಿ, ಜಿಲ್ಲಾ ಮಟ್ಟದಿಂದಲೇ ಜಿಡಿಪಿ ಗುರಿ ಹೆಚ್ಚಳ ಮಾಡುವತ್ತ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
undefined
ಇದೇ ವೇಳೆ ಇತ್ತೀಚೆಗೆ ಕೊನೆಗೊಂಡ ಲೋಕಸಭೆ ಚುನಾವಣೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆ ಎಂದು ಬಣ್ಣಿಸಿದ ಮೋದಿ, ಇದೀಗ ಎಲ್ಲರೂ ಒಟ್ಟಾಗಿ ಭಾರತದ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಸಮಯ ಬಂದಿದೆ. ಎಲ್ಲರೂ ಒಟ್ಟಾಗಿ ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು.
2022ರ ವೇಳೆಗೆ ನವ ಭಾರತವನ್ನು ನಿರ್ಮಿಸುವ ಸಾಮಾನ್ಯ ಗುರಿಯನ್ನು ನಾವೆಲ್ಲರೂ ಹೊಂದಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಸಾಧ್ಯ ಎನ್ನುವುದಕ್ಕೆ ಸ್ವಚ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಆವಾಸ್ ಯೋಜನೆಗಳು ನಿದರ್ಶನಗಳಾಗಿವೆ ಎಂದು ತಿಳಿಸಿದರು.
ಸಬಲೀಕರಣ, ಜೀವನ ಮಟ್ಟಸುಧಾರಣೆಯನ್ನು ಪ್ರತಿಯೊಬ್ಬ ಭಾರತೀಯನಿಗೂ ಒದಗಿಸಬೇಕಿದೆ. ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಅಂಗವಾಗಿ ನಿಗದಿಪಡಿಸಿಕೊಂಡಿರುವ ಗುರಿಗಳನ್ನು ಅ.2ರ ಒಳಗಾಗಿ ಸಾಧಿಸಬೇಕಿದೆ. 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ 2022ರ ವೇಳೆಗೆ ಸಾಧಿಸಬೇಕಿರುವ ಗುರಿಗಳಿಗಾಗಿ ಆದಷ್ಟುಶೀಘ್ರವಾಗಿ ಕಾರ್ಯವನ್ನು ಆರಂಭಿಸಬೇಕು. 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಬೆಳೆಸುವ ಗುರಿಯನ್ನು ಸಾಧಿಸಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಬರ ಎದುರಿಸಲು ಕ್ರಮ:
ಇದೇ ವೇಳೆ ದೇಶದ ಹಲವು ಭಾಗದಲ್ಲಿ ಬರಗಾಲ ಪರಿಸ್ಥಿತಿ ಇರುವುದನ್ನು ಪ್ರಸ್ತಾಪಿಸಿದ ಮೋದಿ, ಬರ ಪರಿಸ್ಥಿತಿಯನ್ನು ಎದುರಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕಿದದೆ. ‘ಪ್ರತಿ ಹನಿ, ಹೆಚ್ಚು ಬೆಳೆ’ (ಪರ್ ಡ್ರಾಪ್ ಮೋರ್ ಕ್ರಾಪ್)ಯ ನೀತಿಯನ್ನು ಉತ್ತೇಜಿಸಬೇಕಿದೆ. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಿಂದ ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ, ಹಣ್ಣು ಮತ್ತು ತರಕಾರಿ ಬೆಳೆಗಳ ಮೇಲೆ ಗಮನ ಕೇಂದ್ರೀಕರಿಸಬೇಕಿದೆ ಎಂದು ಹೇಳಿದರು.
ರೈತರ ಆದಾಯ ದುಪ್ಪಟ್ಟು:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳು ಮತ್ತು ಇತರ ರೈತ ಕೇಂದ್ರೀಕೃತ ಯೋಜನೆಗಳು ನಿಗದಿತ ಸಮಯಕ್ಕೆ ಫಲಾನುಭವಿಗಳನ್ನು ತಲುಪುವಂತಾಗಬೇಕು. ಕೃಷಿಯಲ್ಲಿ ರಚನಾತ್ಮಕ ಸುಧಾರಣೆಯ ಅಗತ್ಯವಿದೆ. ಕಾರ್ಪೋರೇಟ್ ಬಂಡವಾಳ, ಸರಕು ಸಾಗಣೆ ವ್ಯವಸ್ಥೆಯ ಸುಧಾರಣೆ, ಸೂಕ್ತ ಮಾರುಕಟ್ಟೆಯ ನಿರ್ಮಿಸಿಕೊಡಬೇಕಿದೆ. ಆಹಾರ ಸಂಸ್ಕರಣೆ ಪ್ರಕ್ರಿಯೆ ಇನ್ನಷ್ಟುವೇಗ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ನಕ್ಸಲ್ ವಿರುದ್ಧ ನಿರ್ಣಾಯಕ ಕದನ:
ಎಡಪಂಥೀಯ ಉಗ್ರವಾದವನ್ನು ಉಲ್ಲೇಖಿಸಿದ ಮೋದಿ, ನಕ್ಸಲ್ ಹಿಂಸಾಚಾರದ ವಿರುದ್ಧದ ಹೋರಾಟ ಇದೀಗ ನಿರ್ಣಾಯಕ ಹಂತದಲ್ಲಿದೆ. ಹಿಂಸಾಚಾರವನ್ನು ದೃಢವಾಗಿ ಎದುರಿಸಬೇಕಿದೆ. ಅದೇ ರೀತಿ ಅಭಿವೃದ್ಧಿಯ ಕಡೆಗೂ ಒತ್ತು ನೀಡಬೇಕಿದೆ ಎಂದು ಹೇಳಿದರು.
ಹಿಂದುಳಿದ 115 ಜಿಲ್ಲೆಗಳ ಅಭಿವೃದ್ಧಿ:
ಇದೇ ವೇಳೆ ಕೇಂದ್ರ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದುಳಿದಿರುವ 115 ಜಿಲ್ಲೆಗಳಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು.
ಆರೋಗ್ಯ ವಲಯದಲ್ಲಿ 2022ರ ವೇಳೆಗೆ ಸಾಧಿಸಬೇಕಾದ ಹಲವಾರು ಗುರಿಗಳನ್ನು ಮನದಲ್ಲಿ ಇಟ್ಟುಕೊಳ್ಳಬೇಕು. 2025ರ ವೇಳೆಗೆ ಟಿಬಿ (ಕ್ಷಯ) ರೋಗವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕಿದೆ. ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗದೇ ಇರುವ ರಾಜ್ಯಗಳು, ಈ ಯೋಜನೆಯನ್ನು ಆದಷ್ಟುಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಪ್ರತಿಯೊಂದು ನಿರ್ಧಾರದಲ್ಲೂ ಆಯೋಗ್ಯ ಮತ್ತು ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಪ್ರಕ್ರಿಯೆ ಎನಿಸಿಕೊಂಡ ಲೋಕಸಭಾ ಚುನಾವಣೆ ಮುಗಿದಿದೆ. ಇದೀಗ ಎಲ್ಲರೂ ಒಟ್ಟಾಗಿ ಭಾರತದ ಅಭಿವೃದ್ಧಿಗೆ ಕಾರ್ಯನಿರ್ವಹಿಸುವ ಸಮಯ ಬಂದಿದೆ. ಬಡತನ, ನಿರುದ್ಯೋಗ, ಬರ, ಪ್ರವಾಹ, ಮಾಲಿನ್ಯ, ಭ್ರಷ್ಟಾಚಾರ ಮತ್ತು ಹಿಂಸಾಚಾರದ ವಿರುದ್ಧ ನಾವೆಲ್ಲ ಹೋರಾಡೋಣ.
- ನರೇಂದ್ರ ಮೋದಿ, ಪ್ರಧಾನಮಂತ್ರಿ