ಖಾದಿ ಉದ್ಯೋಗ್ ಕ್ಯಾಲೆಂಡರ್’ನಿಂದ ಗಾಂಧಿಜೀಗೆ ಕೊಕ್ ನೀಡಿದ ಮೋದಿ; ವ್ಯಾಪಕ ಆಕ್ರೋಶ

By Suvarna Web DeskFirst Published Jan 12, 2017, 9:08 AM IST
Highlights

ಪ್ರಧಾನಿ ಮೋದಿಯವರು ಖಾದಿಯ ದೊಡ್ಡ ಹರಿಕಾರ, ಬಹಳ ದೀರ್ಘಕಾಲದಿಂದ ಖಾದಿಯನ್ನೇ ಧರಿಸುವ ಮೂಲಕ ಅದನ್ನು ಜನಪ್ರಿಯಗೊಳಿಸಿದ್ದಾರೆ: ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೆನಾ

ನವದೆಹಲಿ (ಜ.12): ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಖಾದಿ ಉದ್ಯೋಗ್ ಕ್ಯಾಲೆಂಡರ್ ಹಾಗೂ ಡೈರಿಯಿಂದ ದೇಶದ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರಿಗೇ ಪ್ರಧಾನಿ ಮೋದಿಯವರು ಕೊಕ್ ನೀಡಿದ್ದಾರೆ.

ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ವು ಪ್ರತಿವರ್ಷ ಪ್ರಕಟಿಸುವ ಕ್ಯಾಲೆಂಡರ್ ಹಾಗೂ ಡೈರಿ ಪುಸ್ತಕಗಳಲ್ಲಿ ಖಾದಿ ತೊಟ್ಟ ಗಾಂಧಿಜೀ ಚರಕದಿಂದ ನೂಲು ತೆಗೆಯುವ ಚಿತ್ರವಿರುತ್ತಿತ್ತು. ಆದರೆ ಈ ಬಾರಿ ಪ್ರಧಾನಿ ಮೋದಿಯವರು ಆ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ.

ಇಡಿಯ ಖಾದಿ ಉದ್ಯೋಗವು ಗಾಂಧಿಜೀಯವರ ತತ್ವಾದರ್ಶಗಳ ಬುನಾದಿಯ ಮೇಲೆ ನೆಲೆನಿಂತಿದೆ. ಅವರು ಚರಕದಿಂದ ನೂಲು ತೆಗೆಯುವ ಚಿತ್ರ ತಲೆಮಾರುಗಳಿಂದ ಜನಮಾನಸದಲ್ಲಿ ಸೇರಿಕೊಂಡಿದೆ. ಹೊಸ ಬೆಳವಣಿಗೆಯಿಂದ ಅಘಾತಗೊಂಡಿರುವ ಕೆವಿಐಸಿಯ ಸಿಬ್ಬಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರಲ್ಲದೇ, ಬಾಯಿ ಮೇಲೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ್ದಾರೆಂದು ಬಿಸ್’ನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.

ಆದರೆ ಕೆವಿಐಸಿ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೆನಾ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿಯವರು ಖಾದಿಯ ದೊಡ್ಡ ಹರಿಕಾರ, ಬಹಳ ದೀರ್ಘಕಾಲದಿಂದ ಖಾದಿಯನ್ನೇ ಧರಿಸುವ ಮೂಲಕ ಅದನ್ನು ಜನಪ್ರಿಯಗೊಳಿಸಿದ್ದಾರೆ. ಅವರ ‘ಮೇಕ್ ಇನ್ ಇಂಡಿಯಾ’ ಹಾಗೂ ‘ಕೌಶಲಾಭಿವೃದ್ಧಿ’ಯಂತಹ ಯೋಜನೆಗಳು ಕವಿಐಸಿಯ ಧ್ಯೇಯೋದ್ದೇಶಗಳೊಂದಿಗೆ ಸಾಮ್ಯತೆ ಹೊಂದಿವೆ, ಎಂದು ಸಕ್ಸೆನಾ ಹೇಳಿದ್ದಾರೆ.

ಕೆವಿಐಸಿಯ ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆಯಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

click me!