
ನವದೆಹಲಿ(ಅ. 04): ಅನಿರೀಕ್ಷಿತ ಕ್ರಮವಾಗಿ ಕೇಂದ್ರ ಸರಕಾರವು ಇಂಧನದ ಮೇಲಿನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್'ಗೆ 2 ರೂಪಾಯಿ ಎಕ್ಸೈಸ್ ಡ್ಯೂಟಿ ಕಡಿಮೆ ಮಾಡಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಂದು ಲೀಟರ್'ಗೆ 2.50 ಮತ್ತು 2.25 ರೂಪಾಯಿ ಇಳಿಕೆಯಾಗಿದೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಪೆಟ್ರೋಲ್ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ನಿನ್ನೆಯಷ್ಟೇ ಪೆಟ್ರೋಲ್ ಬೆಲೆ 7 ರೂಪಾಯಿಯಷ್ಟು ಏರಿಕೆಯಾಗಿತ್ತು. ಇಂದು ಅಬಕಾರಿ ಸುಂಕ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಏರಿಕೆ ಬಿಸಿ ಸ್ವಲ್ಪ ತಗ್ಗಿದಂತಾಗಿದೆ.
ನೂತನ ದರ ಬದಲಾವಣೆಯಲ್ಲಿ ಬೆಂಗಳೂರಿನಲ್ಲಿ ಲೀಟರ್'ಗೆ 71.95 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 69.55 ರೂ.ಗೆ ಇಳಿದಿದೆ. ಡೀಸೆಲ್ ಬೆಲೆ 59.22 ರೂ.ನಿಂದ 56.96 ರೂಪಾಯಿಗೆ ಇಳಿದಿದೆ.
ಸಾವಿರಾರು ಕೋಟಿ ರೂ. ನಷ್ಟ:
ಅಬಕಾರಿ ಸುಂಕ ಕಡಿಮೆ ಮಾಡುವ ಸರಕಾರದ ನಿರ್ಧಾರದಿಂದ ಅದರ ಬೊಕ್ಕಸಕ್ಕೆ ವಾರ್ಷಿಕ ಬರೋಬ್ಬರಿ 26 ಸಾವಿರ ರೂಪಾಯಿ ಆದಾಯ ಕೈತಪ್ಪಲಿದೆ. ಆದರೆ, 15 ತಿಂಗಳ ಹಿಂದೆ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 11.77 ರೂ ಹಾಗೂ 13.47 ರೂಪಾಯಿ ಅಬಕಾರಿ ಸುಂಕ ಹೆಚ್ಚಳ ಮಾಡಿತ್ತು. ಇದರಿಂದ 15 ತಿಂಗಳಲ್ಲಿ ಸರಕಾರದ ಬೊಕ್ಕಸಕ್ಕೆ ಹೆಚ್ಚೂಕಡಿಮೆ ಮೂರೂವರೆ ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ.
ಪೆಟ್ರೋಲ್ ಮತ್ತು ಡೀಸೆಲ್'ಗೆ ಭಾರತದಲ್ಲಿ ಸಿಕ್ಕಾಪಟ್ಟೆ ತೆರಿಗೆಗಳಿವೆ. ಮೂಲ ಪೆಟ್ರೋಲ್ ಬೆಲೆಗೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ತೆರಿಗೆ, ಅಬಕಾರಿ ಸುಂಕ ಮತ್ತು ಡೀಲರ್ ಕಮಿಷನ್'ಗಳು ಸೇರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.