ವಿಶ್ವದಾದ್ಯಂತ ಪೆಡಂಭೂತದಂತೆ ಕಾಡುತ್ತಿರುವ ‘ವಾನ್ನಾ ಕ್ರೈ ರ‌್ಯಾನ್ಸಮ್‌ವೇರ್’ ಸೈಬರ್ ದಾಳಿ ಭೀತಿ ರಾಜ್ಯದ ಎಟಿಎಂಗಳ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಬಹುತೇಕ ಎಟಿಎಂಗಳು ಕಳೆದ ಎರಡು ದಿನಗಳಿಂದ ಬಾಗಿಲೆಳೆದುಕೊಂಡಿವೆ. ₹500, ₹1000 ಮುಖಬೆಲೆಯ ನೋಟು ಅಮಾನ್ಯ ಮಾಡಿದ ಬಳಿಕ ಉಂಟಾಗಿದ್ದ ಪರಿಸ್ಥಿತಿ ಮತ್ತೆ ತಲೆದೋರಿದ್ದು ಜನ ಹಣ ಸಿಗದೆ ಹೈರಾಣಾಗುತ್ತಿದ್ದಾರೆ. ಕಳೆದ ವಾರ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೈಬರ್ ದಾಳಿಯಿಂದ ಲಕ್ಷಾಂತರ ಕಂಪ್ಯೂಟರ್‌ಗಳಲ್ಲಿನ ಮಾಹಿತಿಗೆ (ಡೇಟಾ) ಕನ್ನ ಹಾಕಿದ್ದು ಎಲ್ಲಾ ಮಾಹಿತಿಗಳನ್ನೂ ಲಾಕ್ ಮಾಡಿದೆ.
ಬೆಂಗಳೂರು (ಮೇ.16): ವಿಶ್ವದಾದ್ಯಂತ ಪೆಡಂಭೂತದಂತೆ ಕಾಡುತ್ತಿರುವ ‘ವಾನ್ನಾ ಕ್ರೈ ರ‌್ಯಾನ್ಸಮ್‌ವೇರ್’ ಸೈಬರ್ ದಾಳಿ ಭೀತಿ ರಾಜ್ಯದ ಎಟಿಎಂಗಳ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಬಹುತೇಕ ಎಟಿಎಂಗಳು ಕಳೆದ ಎರಡು ದಿನಗಳಿಂದ ಬಾಗಿಲೆಳೆದುಕೊಂಡಿವೆ. ₹500, ₹1000 ಮುಖಬೆಲೆಯ ನೋಟು ಅಮಾನ್ಯ ಮಾಡಿದ ಬಳಿಕ ಉಂಟಾಗಿದ್ದ ಪರಿಸ್ಥಿತಿ ಮತ್ತೆ ತಲೆದೋರಿದ್ದು ಜನ ಹಣ ಸಿಗದೆ ಹೈರಾಣಾಗುತ್ತಿದ್ದಾರೆ.
ಕಳೆದ ವಾರ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೈಬರ್ ದಾಳಿಯಿಂದ ಲಕ್ಷಾಂತರ ಕಂಪ್ಯೂಟರ್‌ಗಳಲ್ಲಿನ ಮಾಹಿತಿಗೆ (ಡೇಟಾ) ಕನ್ನ ಹಾಕಿದ್ದು ಎಲ್ಲಾ ಮಾಹಿತಿಗಳನ್ನೂ ಲಾಕ್ ಮಾಡಿದೆ.
ಈ ಲಾಕ್ ಬಿಡುಗಡೆ ಮಾಡಬೇಕಿದ್ದಲ್ಲಿ ಪ್ರತಿ ಕಂಪ್ಯೂಟರ್‌ಗೆ ತಲಾ 300 ಡಾಲರ್ ನೀಡುವಂತೆ ಬೇಡಿಕೆ ಇಟ್ಟಿರುವ ಹ್ಯಾಕರ್‌ಗಳು 150 ಕ್ಕೂ ಹೆಚ್ಚು ದೇಶಗಳನ್ನು ಕಾಡಿದ್ದಾರೆ. ಇದೇ ದಾಳಿ ಭಾರತದ ಎಟಿಎಂಗಳನ್ನು ಹಾಳುಗೆಡವಬಹುದೆಂಬ ಭೀತಿ ಹಾಗೂ ಗ್ರಾಹಕರ ಆಧಾರ್ ಸಂಯೋಜಿತ ದಾಖಲೆಗಳನ್ನೂ ಕದಿಯಬಹುದು ಎಂಬ ಆತಂಕದಿಮದ ಎಟಿಎಂಗಳನ್ನು ಅಘೋಷಿತವಾಗಿ ಬಂದ್ ಮಾಡಲಾಗಿದೆ. ಇದೆಲ್ಲರ ಭೀತಿಯಿಂದಾಗಿ ಬ್ಯಾಂಕುಗಳು ಎಟಿಎಂಗೆ ಹಣ ತುಂಬದ ಪರಿಣಾಮ ಜನರು ಪರದಾಡಬೇಕಾಗಿದೆ.
ದೇಶದ 2.5 ಲಕ್ಷಕ್ಕೂ ಹೆಚ್ಚಿನ ಎಟಿಎಂಗಳಲ್ಲಿ ಶೇ. 60 ಕ್ಕೂ ಹೆಚ್ಚು ಎಟಿಎಂಗಳು ಹಳೆಯ ವಿಂಡೋಸ್ ಎಕ್ಸ್‌ಪಿ ತಂತ್ರಜ್ಞಾನವನ್ನು ಹೊಂದಿದ್ದು ವಾನ್ನಾಕ್ರೈ ವೈರಸ್‌ಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳನ್ನು ಉನ್ನತೀಕರಿಸುವಂತೆ ಸೂಚಿಸಿತ್ತು. ಹೀಗಾಗಿ ಎಟಿಎಂಗಳ ತಂತ್ರಾಂಶವನ್ನು ಅಪ್‌ಗ್ರೇಡ್ ಮಾಡುವ ಕಾರ್ಯ ಸಾಗಿದ್ದು, ಇದಾದ ನಂತರವೇ ಎಟಿಎಂಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಬ್ಯಾಂಕ್‌ಗಳ ಮುಖ್ಯಸ್ಥರು ಹಿರಿಯ ಅಧಿಕಾರಿಗಳು ಬಾಯ್ಬಿಡುತ್ತಿಲ್ಲ.
ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾಹಿತಿ ಇಲ್ಲ:
‘ವಾನ್ನಾ ಕ್ರೈ ರ‌್ಯಾನ್ಸಮ್‌ವೇರ್’ ವೈರಸ್ ರಾಜ್ಯದಲ್ಲಿನ ಎಟಿಎಂಗಳ ಮೇಲೆ ಉಂಟು ಮಾಡಿರುವ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ‘ಕನ್ನಡಪ್ರಭ’ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳು ಹಾಗೂ ಎಟಿಎಂಗಳನ್ನು ನಿರ್ವಹಿಸುತ್ತಿರುವ ಡಿಐಟಿಗಳನ್ನು ಸಂಪರ್ಕಿಸಿತು. ಆದರೆ ಎಟಿಎಂನ ಬಹುತೇಕ ವ್ಯವಹಾರಗಳು, ಯಂತ್ರಗಳ ನಿರ್ವಹಣೆಗಳನ್ನು ಹೊರಗುತ್ತಿಗೆ ನೀಡಲಾಗಿರುವುದರಿಂದ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ಇರಲಿಲ್ಲ. ಕೆಲವೊಂದು ಬ್ಯಾಂಕ್‌ಗಳ ವ್ಯವಸ್ಥಾಪಕ ವರ್ಗ ಈ ಕುರಿತು ಸೂಕ್ತ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳ ಬೆಂಗಳೂರು ಕೇಂದ್ರ ಕಚೇರಿಗಳಲ್ಲೂ ಗ್ರಾಹಕರ ದೂರುಗಳಿಗೆ ಸೂಕ್ತ ಮಾಹಿತಿಯು ದೊರೆಯುತ್ತಿರಲಿಲ್ಲ.
ತಂತ್ರಾಂಶ ಅಪ್‌ಡೇಟ್ ತಡ
ಎಟಿಎಂಗಳು ಮಾಮೂಲಿನಂತೆ ಸೇವೆ ನೀಡಲು ಅವುಗಳ ತಂತ್ರಾಂಶವನ್ನು ಅಪ್‌ಡೇಟ್ ಮಾಡಲೇಬೇಕಾಗುತ್ತದೆ. ಇದು ಒಂದೆರಡು ದಿನಗಳಲ್ಲಿ ಮುಗಿಯುವ ಕೆಲಸವಲ್ಲ. ದೇಶದಲ್ಲಿನ ಎಲ್ಲ ಎಟಿಎಂಗಳನ್ನು ಏಕ ಕಾಲದಲ್ಲಿ ಅಪ್‌ಡೇಟ್ ಮಾಡಬೇಕಾಗುತ್ತದೆ. ಎಟಿಎಂ ನಿರ್ವಹಣೆಯನ್ನು ಪಡೆದಿರುವ ಗುತ್ತಿಗೆ ಸಂಸ್ಥೆಯೇ ಈ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅಪ್‌ಡೇಟ್ ಆಗುವ ತನಕ ಬ್ಯಾಂಕುಗಳು ಎಟಿಎಂಗಳಿಗೆ ಹಣ ತುಂಬುವುದಿಲ್ಲ. ಅಲ್ಲಿವರೆಗೆ ಜನರ ಪರದಾಟ ನಿಲ್ಲಲ್ಲ. ಆನ್‌ಲೈನ್‌ನಲ್ಲಿ ವಹಿವಾಟು ಮಾಡಲು ಜನರಿಗೆ ಹೆದರಿಕೆ. ಹೀಗಾಗಿ ಜನರು ಮತ್ತೆ ಬ್ಯಾಂಕುಗಳತ್ತ ಮುಖ ಮಾಡದೇ ಬೇರೆ ದಾರಿ ಇಲ್ಲದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.