
ಬೆಂಗಳೂರು: ಯಲಹಂಕ ಉಪನಗರ ಆಧಾರ್ ಕೇಂದ್ರದ ಮೂವರ ಬಂಧನ ತಾವೇ ನಕಲಿ ದಾಖಲೆ ಸೃಷ್ಟಿಸಿ ಕಾರ್ಡ್ ಮಾಡಿಕೊಡುತ್ತಿದ್ದ ನೌಕರರು ಸಾರ್ವಜನಿಕರಿಗೆ ಒಂದು ಸಾವಿರ ರುಪಾಯಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪದ ಮೇರೆಗೆ ಆಧಾರ್ ಕೇಂದ್ರದ ಮೂವರು ನೌಕರರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಉಪ ನಗರದ 1ನೇ ಹಂತದ ಆಧಾರ್ ಕೇಂದ್ರದ ಮಾಲೀಕ ಮೋಹನ್‌ಕುಮಾರ್, ಡಿಟಿಪಿ ಆಪರೇಟರ್‌ಗಳಾದ ಪ್ರದೀಪ್‌ಕುಮಾರ್ ಹಾಗೂ ಶ್ರೀನಿವಾಸ್ ಎಂ.ರಾಠೋಡ್ ಬಂಧಿತರು. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ನಿವೃತ್ತ ಸರ್ಕಾರಿ ನೌಕರ ದೇವರಾಜ್ ಹಾಗೂ ಆಧಾರ್ ಕೇಂದ್ರ ಮತ್ತೊಬ್ಬ ಉದ್ಯೋಗಿ ಮೇಘಾದತ್ತ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.
ಇತ್ತೀಚಿಗೆ ಪಾಕಿಸ್ತಾನ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದ ಬಳಿಕ ಎಚ್ಚೆತ್ತ ಯುಐಎ ಅಧಿಕಾರಿಗಳು, ನಗರದ ಎಲ್ಲಾ ಆಧಾರ್ ಕೇಂದ್ರಗಳ ಕಾರ್ಯವೈಖರಿ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಆಗ ಯಲಹಂಕ ಉಪ ನಗರದ 1ನೇ ಹಂತದ ಆಧಾರ್ ಕೇಂದ್ರದ ಬಗ್ಗೆ ಅನುಮಾನಗೊಂಡ ಅಧಿಕಾರಿಗಳು, ಕೂಡಲೇ ಆ ಕೇಂದ್ರ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಭಾನಗಡಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ನಿವೃತ್ತ ಅಧಿಕಾರಿ ಗೆಜೆಟೆಡ್ ಅಧಿಕಾರಿ: ಶಿಕ್ಷಣ ಇಲಾಖೆಯ ನಿವೃತ್ತ ನೌಕರ ದೇವರಾಜ್, ತಾನೇ ಗೆಜೆಟೆಡ್ ಅಧಿಕಾರಿ ಎಂದು ದಾಖಲೆಗಳಿಗೆ ಸಹಿ ಮಾಡಿಕೊಟ್ಟಿದ್ದ. ಹೀಗೆ ಸೃಷ್ಟಿಸಿದ ನಕಲಿ ದಾಖಲೆಗಳನ್ನು ಬಳಸಿಕೊಂಡು ಸುಮಾರು 100ಕ್ಕೂ ಅಧಿಕ ಜನರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಕ್ರಮ ಗೊತ್ತಾದ ಕೂಡಲೇ ಯುಐಎ ಬೆಂಗಳೂರು ಘಟಕದ ಉಪ ನಿರ್ದೇಶಕ ಅಶೋಕ್ ಲೆನಿನ್ ಬುಧವಾರ ಯಲಹಂಕ ಉಪ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರಿನ್ವಯ ನಕಲಿ ದಾಖಲೆ ಸೃಷ್ಟಿ(ಐಪಿಸಿ 467, 468) ಹಾಗೂ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು (471) ಮತ್ತು ಆಧಾರ್ ಕಾಯ್ದೆ ಸೆಕ್ಷನ್ 34 ಮತ್ತು 42 ರಡಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಸಂಜೆಯೇ ಆ ಕೇಂದ್ರದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.