3 ದಿನ ಮೊದಲ ಪತ್ನಿ, 3 ದಿನ 2ನೇ ಪತ್ನಿ, 7ನೇ ದಿನ ಏಕಾಂಗಿ!

By Suvarna Web DeskFirst Published May 30, 2017, 6:18 PM IST
Highlights

ಈ ಪ್ರಕರಣವನ್ನು ಇತ್ಯರ್ಥಪಡಿಸಿದ ಪೊಲೀಸರು ಮೊದಲ ಪತ್ನಿಯ ಬಳಿ ಮೂರು ದಿನ, ಇನ್ನೊಬ್ಬಳ ಬಳಿ ಮೂರು ದಿನ ಇರಬೇಕು. ಏಳನೇ ದಿನ ಒಂಟಿಯಾಗಿ ಇರಬೇಕು ಎಂದು ಸೂಚಿಸಿ ಜಗಳಕ್ಕೆ ಅಂತ್ಯ ಹಾಡಿದ್ದಾರೆ. ಈ ಪ್ರಸ್ತಾವನೆಗೆ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.

ಪಟನಾ: ಇಬ್ಬರನ್ನು ಕಟ್ಟಿಕೊಂಡು ಸಮಸ್ಯೆ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ, ಪೊಲೀಸರು ಠಾಣೆಯಲ್ಲೇ ಸಂಧಾನ ಸೂತ್ರ ಸಿದ್ಧಪಡಿಸಿ ಕಳುಹಿಸಿದ ಅಚ್ಚರಿಯ ಘಟನೆಯೊಂದು ಬಿಹಾರದ ಪಟನಾದಲ್ಲಿ ನಡೆದಿದೆ. ಇದರನ್ವಯ ಆತನಿಗೆ ವಾರದ ಮೊದಲ ಮೂರು ದಿನ ಮೊದಲನೇ ಪತ್ನಿಯ ಬಳಿ, ನಂತರದ ಮೂರು ದಿನ ಎರಡನೇ ಪತ್ನಿಯ ಮನೆಯಲ್ಲಿ ಮತ್ತು ಉಳಿದ ಒಂದು ದಿನವನ್ನು ಒಬ್ಬಂಟಿಯಾಗಿ ಇರಬೇಕು ಎಂದು ಸೂಚಿಸಲಾಗಿದೆ. ಇದಕ್ಕೆ ಇಬ್ಬರು ಪತ್ನಿಯರು ಮತ್ತು ಪತಿ ಮಹಾಶಯ ಒಪ್ಪಿರುವ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥವಾಗಿದೆ.

ಅರುಣ್‌ ಎಂಬಾತ ಪಟನಾದಲ್ಲಿ ನರ್ಸಿಂಗ್‌ ಹೋಮ್‌ ನಡೆಸುತ್ತಿದ್ದಾನೆ. ಈತ 1996ರಲ್ಲಿ ಮೀನಾ ಎಂಬಾಕೆಯನ್ನು ವರಿಸಿದ್ದ. ಈ ದಂಪತಿಗೆ ಮಕ್ಕಳೂ ಇದ್ದಾರೆ. ಈ ನಡುವೆ ಕೆಲ ವರ್ಷಗಳ ಹಿಂದೆ ಪೂಜಾ ಎಂಬುವವರನ್ನು ಅರುಣ್‌ ಮದುವೆಯಾಗಿದ್ದ. ಆದರೆ, ಮಹಾಶಯನ ವಿಷಯ ಇಬ್ಬರು ಪತ್ನಿಯರಿಗೂ ಇತ್ತೀಚೆಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೂಜಾ ಠಾಣೆ ಮೆಟ್ಟಿಲೇರಿದ್ದಳು. ಈ ವೇಳೆ ಅರುಣ್‌ ಇದೆಲ್ಲಾ ಸುಳ್ಳು ಎಂದು ಆಕೆಯನ್ನು ಸಾಗಹಾಕುವುದಕ್ಕೆ ಯತ್ನಿಸಿದ್ದ. ಆದರೆ ಆಕೆ ಸಾಕ್ಷ್ಯ ಸಮೇತ ಬಣ್ಣ ಬಯಲು ಮಾಡಿದಾಗ ಆಕೆಯನ್ನು ಮದುವೆಯಾಗಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದ.

ಈ ಪ್ರಕರಣವನ್ನು ಇತ್ಯರ್ಥಪಡಿಸಿದ ಪೊಲೀಸರು ಮೊದಲ ಪತ್ನಿಯ ಬಳಿ ಮೂರು ದಿನ, ಇನ್ನೊಬ್ಬಳ ಬಳಿ ಮೂರು ದಿನ ಇರಬೇಕು. ಏಳನೇ ದಿನ ಒಂಟಿಯಾಗಿ ಇರಬೇಕು ಎಂದು ಸೂಚಿಸಿ ಜಗಳಕ್ಕೆ ಅಂತ್ಯ ಹಾಡಿದ್ದಾರೆ. ಈ ಪ್ರಸ್ತಾವನೆಗೆ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ. 

epaper.kannadaprabha.in

click me!