
ಬೆಂಗಳೂರು(ಎ.21): ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಎರಡನೇ ಅವಧಿಗೆ ಮುಂದುವರೆಯೋ ಭಾಗ್ಯ ಪರಮೇಶ್ವರ್ಗೆ ಇಲ್ಲವೇನೋ? ಯಾಕೆಂದರೆ ಆ ಸ್ಥಾನಕ್ಕೆ ಮಾಜಿ ಸಚಿವ ಎಸ್ ಆರ್ ಪಾಟೀಲ್ ಭಾರೀ ಪೈಪೋಟಿ ನಡೆಸಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೇ ಎಸ್ ಆರ್ ಪಾಟೀಲ್ ಪರ ಬ್ಯಾಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎಸ್ ಆರ್ ಪಾಟೀಲ್ ಇಲ್ಲವಾದಲ್ಲಿ ಸಚಿವ ಎಂ ಬಿ ಪಾಟೀಲಗಾದರೂ ಕೆಪಿಸಿಸಿ ಸಾರಥ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಸಿಎಂ ಲಾಬಿ ನಡೆಸಿದ್ದಾರೆ.
ಎಸ್.ಆರ್. ಪಾಟೀಲ್ ಪರ ಸಿದ್ದರಾಮಯ್ಯ ಲಾಬಿ
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಪ್ರಸ್ತಾಪವಾಗುತ್ತಲೇ ಹಲವರ ಹೆಸರು ಕೇಳಿ ಬಂದಿತ್ತು. ಸಚಿವರಾದ ಡಿ ಕೆ ಶಿವಕುಮಾರ್, ಎಂ ಬಿ ಪಾಟೀಲ್, ಮಹದೇವಪ್ಪ, ಸಂಸದ ಕೆ ಹೆಚ್ ಮುನಿಯಪ್ಪ, ಮಾಜಿ ಸಚಿವ ಎಸ್ ಆರ್ ಪಾಟೀಲ್ ಜೊತೆಗೆ ಪರಮೇಶ್ವರ್. ಹೀಗೆ ಹಲವು ನಾಯಕರು ರೇಸ್'ನಲ್ಲಿದ್ದರು. ಇದೀಗ ಅಧ್ಯಕ್ಷ ಹುದ್ದೆಯ ಚಿತ್ರಣವೇ ಬದಲಾಗಿದೆ. ಈಗೇನಿದ್ದರೂ ಪಾಟೀಲ್ ವರ್ಸಸ್ ಪಾಟೀಲ್. ಹೌದು, ಸಚಿವ ಎಂಬಿ ಪಾಟೀಲ್ ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ್ ಮಧ್ಯೆ ಹಣಾಹಣಿ ಏರ್ಪಟ್ಟಿದ್ದು ಸಿಎಂ ಕೂಡ ಇವರಿಬ್ಬರ ಪರವಾಗಿ ಲಾಭಿ ಮಾಡುತ್ತಿದ್ದಾರೆ. ಎಸ್.ಆರ್.ಪಾಟೀಲ್ ಸಿದ್ದರಾಮಯ್ಯನವರ ಮೊದಲ ಆಧ್ಯತೆ ಎನ್ನುವ ಮಾತು ಸಿಎಂ ಆಪ್ತ ವಲಯದಿಂದಲೇ ಕೇಳಿ ಬರುತ್ತಿದೆ.
ಎಸ್ ಆರ್ ಪಾಟೀಲ್ ಮೇಲೆ ಮುಖ್ಯಮಂತ್ರಿಗ್ಯಾಕೆ ಕಣ್ಣು ?
ಮಾಜಿ ಸಚಿವ ಎಸ್.ಆರ್. ಪಾಟೀಲ್ ಸಿಎಂ ಅತ್ಯಾಪ್ತರಲ್ಲಿ ಒಬ್ಬರು. ಇವರ ಮೇಲೆ ಯಾವುದೇ ಹಗರಣ, ಆರೋಪಗಳಿಲ್ಲ. ಪಕ್ಷದಲ್ಲೂ ಎಸ್ ಆರ್ ಪಾಟೀಲ್ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಇನ್ನೂ ಇವರಿಗೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಪಕ್ಷದ ಪ್ರಮುಖ ಹುದ್ದೆ ಉತ್ತರ ಕರ್ನಾಟಕ ಭಾಗದ ನಾಯಕನಿಗೆ ಸಿಕ್ಕಂತಾಗುತ್ತದೆ. ಈ ಮೂಲಕ ಆ ಭಾಗದ ಪ್ರಬಲ ಸಮುದಾಯ ಲಿಂಗಾಯತರ ಓಲೈಕೆಗೆ ಅನುಕೂಲ ವಾಗುತ್ತೆ ಅನ್ನೋ ಲೆಕ್ಕಾಚಾರ.ಎಲ್ಲಕ್ಕಿಂತಹೆಚ್ಚಾಗಿ ಪಕ್ಷದಲ್ಲಿ ಮತ್ತಷ್ಟು ಹಿಡಿತ ಸಾಧಿಸಬಹುದು. ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ಕೊಡಿಸಬಹುದು ಅನ್ನೋದು ಸಿಎಂ ಲೆಕ್ಕಚಾರ.
ಒಂದು ವೇಳೆ ಎಸ್.ಆರ್. ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಒಪ್ಪದಿದ್ದಲ್ಲಿ, ಎಂ ಬಿ ಪಾಟೀಲರ ಹೆಸರು ಪ್ರಸ್ತಾಪಿಸಲು ಸಿಎಂ ರೆಡಿಯಾಗಿದ್ದಾರೆ. ಭಾನುವಾರ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಎ ತೆರಳಲಿರುವ ಸಿಎಂ ಹೈಕಮಾಂಡ್ ಜೊತೆ ಈ ವಿಚಾರವನ್ನೂ ಮಾತನಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್'ನಲ್ಲಿ ತಮ್ಮದೇಯ ಆದ ಪ್ರಭಾವ ಹೊಂದಿರುವ ಡಿ ಕೆ ಶಿವಕುಮಾರ್, ಮುನಿಯಪ್ಪ , ಪರಮೇಶ್ವರ್ ಸುಮ್ಮನಿರುತ್ತಾರೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.