
ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂಬ ಮಾತಿಗೆ ಮೀರಿದ ಶಕ್ತಿಯಾಗಿ, ಆಲದ ಮರದಂತೆ ಎಲ್ಲರಿಗೆ ಆಶ್ರಯದಾತೆಯಾಗಿ ಇದ್ದವರು ಪಾರ್ವತಮ್ಮ ರಾಜ್'ಕುಮಾರ್. ಡಾ| ರಾಜ್'ಕುಮಾರ್ ಚಿತ್ರರಂಗದಲ್ಲಿ ದೊಡ್ಡ ನಟರಾಗಿ ಬೆಳೆಯಲು, ಮಕ್ಕಳೆಲ್ಲರನ್ನೂ ದೊಡ್ಡ ನಟರನ್ನಾಗಿ ಮಾಡಲು ಪಾರ್ವತಮ್ಮ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಚಿತ್ರರಂಗದಲ್ಲಿ ಇಂದು ದೊಡ್ಡ ನಟರೆನ್ನಿಸಿಕೊಂಡವರಿಗೆ ಅವಕಾಶವನ್ನು ನೀಡಿದವರು ಪಾರ್ವತಮ್ಮ.
ಹಳ್ಳಿ ಹೆಣ್ಣು ಮಗಳಾಗಿದ್ದರೂ, ಹೆಚ್ಚು ಓದಿಲ್ಲದಿದ್ದರೂ, ರಾಜ್'ಕುಮಾರ್ ಅವರ ಬದುಕಿನ ಶಕ್ತಿಯಾಗಿ ನಿಂತವರು ಪಾರ್ವತಮ್ಮ. ಬೆಟ್ಟದಂತಹ ಸಮಸ್ಯೆಗಳನ್ನೆಲ್ಲಾ ದಿಟ್ಟತನದಿಂದ ಎದುರಿಸಿದ ಪಾರ್ವತಮ್ಮ, ಡಾ. ರಾಜ್ಕುಮಾರ್ ಅವರ ಇಡೀ ಬದುಕಿನ ಬೆನ್ನೆಲುಬಾಗಿ ನಿಂತ ಗಟ್ಟಿಗಿತ್ತಿ..
ಡಾ. ರಾಜ್'ಕುಮಾರ್ ಅವರ ಚಿತ್ರಗಳು ಅಪಾರ ಯಶಸ್ಸು ಗಳಿಸಲು ಪಾರ್ವತಮ್ಮ ಅವರೇ ಕಾರಣ. ಎಲ್ಲ ಚಿತ್ರಕತೆಯನ್ನು ಆಯ್ಕೆ ಮಾಡುತ್ತಿದ್ದದ್ದು ಪಾರ್ವತಮ್ಮನವರೇ. ರಾಜ್'ಗಿಂತ ಹೆಚ್ಚು ಓದಿದ್ದ ಪಾರ್ವತಮ್ಮ ಅವರಿಗೆ ಕಾದಂಬರಿಗಳನ್ನು ಓದುವ ಹುಚ್ಚು . ಉತ್ತಮ ಸಮಾಜ ನಿರ್ಮಾಣದ ಸಂದೇಶ, ಕೌಟುಂಬಿಕ ಮಹತ್ವದ ಸಾರುವ ಕತೆಗಳನ್ನೇ ಸಿನಿಮಾ ಮಾಡಬೇಕು, ರಾಜ್ ಕುಮಾರ್'ರಿಗೆ ಯಾವ ಪಾತ್ರ ಹೊಂದುತ್ತದೆ ಎಂಬ ಅರಿವು ಪಾರ್ವತಮ್ಮ ಅವರಿಗಿತ್ತು.
ಮಯೂರ, ಹೊಸಬೆಳಕು, ಎರಡು ಕನಸು, ಸಮಯದ ಗೊಂಬೆ, ಜೀವನ ಚೈತ್ರದಂಥ ಕತೆಗಳು ಸಿನಿಮಾ ಆಗಲು ಪಾರ್ವತಮ್ಮ ಕಾರಣ. ಇದೆಲ್ಲದೇ, ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮ ನಾಲ್ಕು ಬ್ಯಾನರ್ ಮೂಲಕ 75 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಹಾಗಾಗಿಯೇ ಇಂದಿಗೂ ರಾಜ್'ಕುಮಾರ್ ಚಿತ್ರಗಳು ಜನಪ್ರಿಯ.
ಹದಿಮೂರು ವರ್ಷದ ಪುಟ್ಟ ಹುಡುಗಿಯಾಗಿದ್ದಾಗಲೇ ರಾಜ್ ಕುಮಾರ್ ಜತೆ ನಿರ್ಧಾರವಾದ ಮದುವೆ. ನಂತರ ಎಲ್ಲಾ ಜವಾಬ್ದಾರಿಗಳನ್ನು ತಮ್ಮ ಹೆಗಲಿಗೆ ತೆಗೆದುಕೊಂಡರು. ಚಿತ್ರ ನಿರ್ಮಾಣ, ವಿತರಣೆ, ವ್ಯವಹಾರ ಎಲ್ಲವನ್ನೂ ಪರಿಣಿತ ವ್ಯವಹಾರಸ್ಥೆಯಾಗಿ ನಿಭಾಯಿಸಿದ ಪಾರ್ವತಮ್ಮ, ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡಮನೆಯನ್ನು ರೂಪಿಸಿದವರು.
ಯಶಸ್ವಿ ಚಿತ್ರ ನಿರ್ಮಾಪಕಿ, ವಿತರಕಿ, ಪತ್ನಿ, ಅಮ್ಮ ಎಲ್ಲವೂ ಆಗಿದ್ದ ಪಾರ್ವತಮ್ಮ ಮುಂದಿನ ತಲೆಮಾರಿನ ಚಿತ್ರರಂಗದವರಿಗೂ ಸ್ಫೂರ್ತಿ.
ಬ್ಯುರೋ ರಿಪೋರ್ಟ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.