
ನವದೆಹಲಿ(ಏ. 16): ಪಠಾಣಕೋಟ್, ಉರಿ ಸೆಕ್ಟರ್ ಸೇರಿದಂತೆ ದೇಶದ ಹಲವೆಡೆ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಗುಪ್ತಚರ ವೈಫಲ್ಯ ಎದ್ದುಕಾಣುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಅಭಿಪ್ರಾಯಪಟ್ಟಿದೆ. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಈ ವಿಚಾರದಲ್ಲಿ ಕೇಂದ್ರ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿದೆ. ಗುಪ್ತಚರ ಸಂಸ್ಥೆಗಳ ವೈಫಲ್ಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಮಿತಿ ಟೀಕಿಸಿದೆ.
ಭಾರತದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆಯಿಂದಿದ್ದಿದ್ದರೆ ಪಠಾಣಕೋಟ್, ಉರಿ, ಪಾಂಪೋರ್, ಬಾರಾಮುಲ್ಲಾ, ನಗರೋಟಾ ದಾಳಿ ಪ್ರಕರಣಗಳನ್ನು ತಪ್ಪಿಸಬಹುದಿತ್ತು. ನಮ್ಮ ಗುಪ್ತಚರ ದೌರ್ಬಲ್ಯಗಳನ್ನು ಈ ಉಗ್ರ ದಾಳಿ ಪ್ರಕರಣಗಳು ಎತ್ತಿತೋರಿಸಿವೆ ಎಂದು ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.
ಪಠಾಣಕೋಟ್ ದಾಳಿ ಪ್ರಕರಣ ಸಂಭವಿಸಿ ಒಂದು ವರ್ಷ ಗತಿಸಿದರೂ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಇನ್ನೂ ತನಿಖೆಯೇ ಮುಗಿದಿಲ್ಲ ಎಂದು ಟೀಕಿಸಿರುವ ಸಮಿತಿಯು, ಈ ಪ್ರಕರಣಗಳ ತನಿಖೆಯನ್ನು ಆದಷ್ಟೂ ಬೇಗ ಮುಗಿಸಿ ಗುಪ್ತಚರ ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಗೃಹ ಸಚಿವಾಲಯಕ್ಕೆ ಸಲಹೆ ನೀಡಿದೆ.
ಗಡಿ ಒಳನುಸುಳುವಿಕೆ ಪ್ರಕರಣಗಳು ಆತಂಕಕಾರಿ ಮಟ್ಟಕ್ಕೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಚಿದಂಬರಂ ನೇತೃತ್ವದ ಸಮಿತಿಯು, ಗಡಿಭಾಗದಲ್ಲಿ ಸುರಂಗದ ಮೂಲಕ ಉಗ್ರರು ನುಸುಳುವುದನ್ನು ತಡೆಯಲು ಇತರ ದೇಶಗಳ ಸುಧಾರಿತ ತಂತ್ರಜ್ಞಾನದ ನೆರವು ಪಡೆಯಬೇಕೆಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.
ಸುರಂಗವನ್ನು ಪತ್ತೆ ಮಾಡಬಲ್ಲ ತಂತ್ರಜ್ಞಾನಗಳು ಅಮೆರಿಕ ಸೇರಿದಂತೆ ಕೆಲವಾರು ದೇಶಗಳಲ್ಲಿವೆ.
ಉಗ್ರರ ದಾಳಿಗಳು ಎಲ್ಲೆಲ್ಲಿ?
2016, ಜ.2ರಂದು ಪಠಾಣಕೋಟ್'ನಲ್ಲಿರುವ ಭಾರತೀಯ ವಾಯುಪಡೆ ನಿಲ್ದಾಣದ ಬಳಿ ಉಗ್ರರು ದಾಳಿ ನಡೆಸಿ 7 ಸೈನಿಕರನ್ನು ಬಲಿತೆಗೆದುಕೊಂಡಿದ್ದರು.
2016, ಸೆ.18ರಂದು ಕಾಶ್ಮೀರದ ಉರಿ ಸೆಕ್ಟರ್'ನಲ್ಲಿರುವ ಬ್ರಿಗೇಡ್ ಕಚೇರಿಯಲ್ಲಿ ಬೆಳ್ಳಂಬೆಳಗ್ಗೆಯೇ 19 ಯೋಧರ ಪ್ರಾಣಪಕ್ಷಿ ಹಾರಿಹೋಗಿತ್ತು.
2016, ಅ. 3ರಂದು ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರು ರಾಷ್ಟ್ರೀಯ ರೈಫಲ್ಸ್'ನ ಕ್ಯಾಂಪ್ ಮೇಲೆ ದಾಳಿ ನಡೆಸಿ ಒಬ್ಬ ಯೋಧನನ್ನು ಕೊಂದಿದ್ದರು
2016, ನ.29ರಂದು ನಗ್ರೋತಾದ ಸೇನಾ ಶಿಬಿರದಲ್ಲಿ 7 ಯೋಧರು ಹತ್ಯೆಯಾಗಿದ್ದರು.
(ಮಾಹಿತಿ: ಪಿಟಿಐ ಸುದ್ದಿ ಸಂಸ್ಥೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.