
ಬೆಂಗಳೂರು (ಜೂ. 22): ವಿಧಾನಸೌಧ ಹಾಗೂ ವಿಕಾಸಸೌಧದ ವಾಹನ ನಿಲುಗಡೆ ಸ್ಥಳವನ್ನು ಖಾಸಗಿ ವಾಹನಗಳ ಮಾಲೀಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡೂ ಕಡೆ ರಾತ್ರಿ ವೇಳೆ ವಾಹನ ನಿಲುಗಡೆ ನಿರ್ಬಂಧಿಸಿ ಸುತ್ತೋಲೆ ಹೊರಡಿಸಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಇನ್ನು ಮುಂದೆ ವಿಕಾಸಸೌಧ ಹಾಗೂ ವಿಧಾನಸೌಧದ ವಾಹನಗಳ ನಿಲುಗಡೆ ಸ್ಥಳದಲ್ಲಿ ರಾತ್ರಿ ವೇಳೆ ಯಾವುದೇ ವಾಹನವನ್ನು ನಿಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿಕಾಸಸೌಧದಲ್ಲಿ ಮೂರು ನೆಲಸ್ತರದ ಮಹಡಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶವಿದೆ. ಇದಲ್ಲದೆ ವಿಧಾನಸೌಧ ಸುತ್ತಲೂ ಇರುವ ರಸ್ತೆ ಬದಿ ಹಾಗೂ ವಿಧಾನಸೌಧದ ಆವರಣದಲ್ಲಿರುವ ಓಪನ್ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಇಲ್ಲಿ ಕೆಲ ಖಾಸಗಿ ವಾಹನಗಳು ಹಾಗೂ ಕೆಲ ಸರ್ಕಾರಿ ವಾಹನಗಳು ಬೇಕಾಬಿಟ್ಟಿಯಾಗಿ ನಿಲುಗಡೆಯಾಗಿರುತ್ತವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಡಿಪಿಎಆರ್ ಉಪ ಕಾರ್ಯದರ್ಶಿ ನಾಗರಾಜ್ ಅವರು ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ದಿನಗಳಿಂದ ನಿಂತಿರುವ ಸರ್ಕಾರಿ ಮತ್ತು ಖಾಸಗಿ ವಾಹನಗಳು ಇದೇ ಸ್ಥಳದಲ್ಲಿ ನಿಲುಗಡೆಯಾಗಿರುವುದನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಅಲ್ಲದೆ, ವಿಧಾನಸೌಧ ಹಾಗೂ ವಿಕಾಸಸೌಧ ಸೇವೆಗೆ ಸಂಬಂಧಪಡದ ವಾಹನಗಳನ್ನೂ ನಿಲುಗಡೆ ಮಾಡಲಾಗುತ್ತಿತ್ತು. ಖಾಸಗಿ ವಾಹನಗಳ ಚಾಲಕರು, ಮಾಲಿಕರು ವಿಧಾನಸೌಧ ಸಿಬ್ಬಂದಿ ಜತೆ ಸೇರಿಕೊಂಡು ರಾತ್ರಿ ವೇಳೆ ವಿಧಾನಸೌಧ ಹಾಗೂ ವಿಕಾಸಸೌಧ ಆವರಣ, ವಾಹನ ನಿಲುಗಡೆ ಸ್ಥಳವನ್ನು ತಮ್ಮ ವಾಹನಗಳ ಪಾರ್ಕಿಂಗ್ ತಾಣಗಳನ್ನಾಗಿ ಬದಲಿಸಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಹೀಗಾಗಿ ವಿಧಾನಸೌಧ ಭದ್ರತಾ ಸಿಬ್ಬಂದಿ ಸೇರಿದಂತೆ ರಾತ್ರಿ ವೇಳೆ ಕಾರ್ಯನಿರತವಾಗಿರುವ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದ ಯಾವುದೇ ಇಲಾಖೆಗಳ ವಾಹನಗಳು ನಿಲ್ಲಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.