ದುನಿಯಾ ವಿಜಯ್ ವಿರುದ್ಧ ಶ್ಯಾಮ್ ಸುಂದರ್ ವಾದ?

By Web DeskFirst Published Sep 25, 2018, 11:33 AM IST
Highlights

ವಿಜಿ ವಿರುದ್ಧ ವಾದಕ್ಕೆ ಶ್ಯಾಮ್‌ ನಿಯೋಜಿಸಿ; ಪರಮೇಶ್ವರ್‌ ಭೇಟಿಯಾಗಿ ಪಾನಿಪುರಿ ಕಿಟ್ಟಿ ಮನವಿ | ಕಾನೂನು ಪ್ರಕಾರ ಕ್ರಮ, ಹಸ್ತಕ್ಷೇಪ ಇಲ್ಲ: ಪರಂ | ಇನ್ನಷ್ಟು ಬಲಗೊಳ್ಳುತ್ತಾ ದುನಿಯಾ ವಿಜಯ್ ಕೇಸ್? 

ಬೆಂಗಳೂರು (ಸೆ. 25):  ನಟ ದುನಿಯಾ ವಿಜಯ್‌ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಮೂರ್ತಿ ಅಲಿಯಾಸ್‌ ಪಾನಿಪುರಿ ಕಿಟ್ಟಿಸೋಮವಾರ ಬೆಳಗ್ಗೆ ಗೃಹ ಖಾತೆಯ ಹೊಣೆಯನ್ನೂ ಹೊತ್ತಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿದರು.

ಈ ವೇಳೆ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರನ್ನಾಗಿ ಹಿರಿಯ ವಕೀಲ ಶ್ಯಾಮ ಸುಂದರ್‌ ಅವರನ್ನು ನೇಮಕ ಮಾಡಬೇಕು ಎಂದು ಉಪ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಮನವಿ ಮಾಡಿದರು. ಶ್ಯಾಮಸುಂದರ್‌ ಅವರು ವಿದ್ವತ್‌ ಹಲ್ಲೆ ಪ್ರಕರಣದಲ್ಲಿ ಪ್ರಭಾವಿ ಶಾಸಕರೊಬ್ಬರ ಪುತ್ರ ನಲಪಾಡ್‌ ವಿರುದ್ಧ ವಾದ ಮಾಡಿದ್ದು ಇಲ್ಲಿ ಗಮನಾರ್ಹ.

ಇದಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕಾನೂನಿನ ಪ್ರಕಾರ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರು ಕ್ರಮ ಕೈಗೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

‘ಆರೋಪಿ ಸ್ಥಾನದಲ್ಲಿರುವ ದುನಿಯಾ ವಿಜಯ್‌ ಮತ್ತು ಸಹಚರರು ಮಾರುತಿ ಗೌಡ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಬಳಿಕ ದುನಿಯಾ ವಿಜಯ್‌ ಮೊಬೈಲ…ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ನಮಗೆ ನ್ಯಾಯ ಕೊಡಿಸಿ’ ಎಂದು ಡಿಸಿಎಂಗೆ ಸಲ್ಲಿಸಿದ ಪತ್ರದಲ್ಲಿ ಕಿಟ್ಟಿಮತ್ತು ಮಾರುತಿ ಗೌಡ ಪಾಲಕರಾದ ಲಕ್ಷ್ಮಿ, ಪುಟ್ಟಸ್ವಾಮಿ ಮನವಿ ಮಾಡಿದ್ದಾರೆ.

ಸೆ.22 ರಂದು ರಾತ್ರಿ ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದ್ದ ದೇಹದಾರ್ಢ್ಯ ಸ್ಪರ್ಧೆ ವೇಳೆ ನಟ ವಿಜಯ್‌ ಹಾಗೂ ಅವರ ಸಹಚರರು ಜಿಮ್‌ ತರಬೇತುದಾರ ಮಾರುತಿಗೌಡನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ ಅಪರಹಣ ಮಾಡಿದ್ದರು. ವಿಷಯ ತಿಳಿದ ಪಾನಿಪುರಿ ಕಿಟ್ಟಿಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರ ಸೂಚನೆ ಬಳಿಕ ಠಾಣೆಗೆ ಬಂದ ವಿಜಯ್‌ ಹಾಗೂ ಸಹಚರರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

click me!