ಜಯಲಲಿತಾರ 2 ಆಸೆ ಈಡೇರಿಸಿದ ಪಳನಿಸ್ವಾಮಿ

By Suvarna Web DeskFirst Published Feb 20, 2017, 3:21 PM IST
Highlights

ತಮಿಳುನಾಡಿನಲ್ಲಿ ಪಾನ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಮದ್ಯದಂಗಡಿಗಳನ್ನು ಹಂತಹಂತವಾಗಿ ಮುಚ್ಚಿಸುವ ಭರವಸೆಯನ್ನು 2016ರ ಚುನಾವಣಾ ಪ್ರಣಾಳಿಕೆಯಲ್ಲಿ ಜಯಲಲಿತಾ ನೀಡಿದ್ದರು.

ಚೆನ್ನೈ(ಫೆ.20): ತಮಿಳುನಾಡು ಮುಖ್ಯಮಂತ್ರಿಯಾಗಿ ಕಾರ್ಯಾರಂಭಿಸಿರುವ ಎಡಪ್ಪಾಡಿ ಪಳನಿಸ್ವಾಮಿ, ಅಣ್ಣಾಡಿಎಂಕೆಯ ದಿವಂಗತ ನಾಯಕ ಜೆ. ಜಯಲಲಿತಾ ಅವರು 2016ರ ಚುನಾವಣೆ ವೇಳೆ ನೀಡಿದ್ದ ಎರಡು ಪ್ರಮುಖ ಭರವಸೆಗಳನ್ನು ಈಡೇರಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಟಾಸ್ಮಾಕ್ ಸಂಸ್ಥೆ ನಡೆಸುತ್ತಿರುವ 500 ಮದ್ಯದಂಗಡಿಗಳನ್ನು ಮುಚ್ಚಿಸುವುದರ ಜತೆಗೆ, ಉದ್ಯೋಗಸ್ಥ ಮಹಿಳೆಯರಿಗೆ ಶೇ.50ರ ರಿಯಾಯಿತಿ (ಗರಿಷ್ಠ 20 ಸಾವಿರ ರು. ಸಬ್ಸಿಡಿ) ದರದಲ್ಲಿ ಸ್ಕೂಟರ್ ಒದಗಿಸುವ ‘ಅಮ್ಮಾ ದ್ವಿಚಕ್ರ ವಾಹನ’ ಯೋಜನೆಗಳನ್ನು ಪ್ರಕಟಿಸಿದ್ದಾರೆ.

ತಮಿಳುನಾಡಿನಲ್ಲಿ ಪಾನ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಮದ್ಯದಂಗಡಿಗಳನ್ನು ಹಂತಹಂತವಾಗಿ ಮುಚ್ಚಿಸುವ ಭರವಸೆಯನ್ನು 2016ರ ಚುನಾವಣಾ ಪ್ರಣಾಳಿಕೆಯಲ್ಲಿ ಜಯಲಲಿತಾ ನೀಡಿದ್ದರು. ಅದರ ಭಾಗವಾಗಿ ಅಧಿಕಾರಕ್ಕೇರುತ್ತಿದ್ದಂತೆ 500 ಅಂಗಡಿಗಳ ಬಾಗಿಲು ಹಾಕಿಸಿದ್ದರು. ಇದೀಗ ಪಳನಿಸ್ವಾಮಿ ಕೂಡ 500 ಮದ್ಯದಂಗಡಿ ಮುಚ್ಚಿಸುವುದರೊಂದಿಗೆ ತಮಿಳುನಾಡಿನಲ್ಲಿದ್ದ ಮದ್ಯದಂಗಡಿಗಳ ಸಂಖ್ಯೆ 6000ದಿಂದ 5000ಕ್ಕೆ ಇಳಿಕೆಯಾಗಿದೆ.

ಇದೇ ವೇಳೆ, ಗರ್ಭಿಣಿಯರ ಸಹಾಯಧನವನ್ನು 12 ಸಾವಿರ ರು.ನಿಂದ 18 ಸಾವಿರಕ್ಕೆ ಹೆಚ್ಚಿಸಿದ್ದಾರೆ. ಮೀನುಗಾರರಿಗೆ ವಿಶೇಷ ವಸತಿ ಯೋಜನೆ ಘೋಷಿಸುವುದರ ಜತೆಗೆ ನಿರುದ್ಯೋಗ ಭತ್ಯೆಗಳನ್ನು ದ್ವಿಗುಣಗೊಳಿಸಿದ್ದಾರೆ.

click me!