
ಬೆಂಗಳೂರು(ಜುಲೈ 23): ರಾಜ್ಯದಲ್ಲಿ ನಾವೀಗ ಅತಿವೃಷ್ಟಿ, ಬರಗಾಲ ಎರಡೂ ಪರಿಸ್ಥಿತಿಗಳನ್ನು ಕಾಣುತ್ತಿದ್ದೇವೆ. ಹಲವು ಸ್ಥಳಗಳಲ್ಲಿ ವರುಣನ ಅಬ್ಬರಕ್ಕೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಇನ್ನೂ ಹಲವು ಕಡೆ ಮಳೆಯಾಗದೇ ಹನಿ ನೀರಿಗಾಗಿ ನೆಲ ಬಾಯ್ದೆರೆದಿರುವ, ರೈತರು ದಿನವೂ ಮುಗಿಲನ್ನು ಎವೆಯಿಕ್ಕದೇ ನೋಡುವ ದೃಶ್ಯ ಕಾಣಸಿಗುತ್ತದೆ. ಒಟ್ಟಾರೆ ಮಳೆ ಬಂದರೂ ಕಷ್ಟ, ಬರದಿದ್ದರೂ ಕಷ್ಟ ಎಂಬಂತಿದೆ ಸ್ಥಿತಿ.
ಮಹಾರಾಷ್ಟ್ರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಜಲಕ್ರಾಂತಿ:
ಕರ್ನಾಟಕದಲ್ಲಿ ಹಲವೆಡೆ ನೀರಿನ ಅಭಾವ ಎದುರಿಸುತ್ತಿರುವಂತೆ ನಮ್ಮ ನೆರೆಯ ಮಹಾರಾಷ್ಟ್ರ ರಾಜ್ಯದ ಹಲವು ಜಿಲ್ಲೆಗಳೂ ನೀರಿಲ್ಲದೇ ತೀವ್ರ ಬರದಿಂದ ಕಂಗೆಟ್ಟಿದ್ದವು. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ. ಅಲ್ಲಿನ ಗ್ರಾಮಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಇದಕ್ಕೆ ಕಾರಣವಾಗಿದ್ದು ಪಾನಿ ಫೌಂಡೇಶನ್.
ಪಾನಿ ಫೌಂಡೇಶನ್:
ಇದು ಬಾಲಿವುಡ್ ನಟ ಅಮೀರ್ ಖಾನ್ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆ. ನೀರಿನ ಅಭಾವವನ್ನ ಮನಗಂಡ ಈ ಸಂಸ್ಥೆ ಮಹಾರಾಷ್ಟ್ರದ ಹಲವು ಗ್ರಾಮಗಳ ಬರವನ್ನ ನೀಗಿಸಲು ಪಣತೊಟ್ಟಿತ್ತು. ಇದಕ್ಕೆ ಸಾಕ್ಷಿಯಾಗಿರುವುದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವೇಳು ಗ್ರಾಮ. ಹೌದು, ನಮ್ಮ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿರುವ ಈ ದಿನಗಳಲ್ಲಿ ಈ 'ವೇಳು' ಗ್ರಾಮ ನಮ್ಮ ಹಳ್ಳಿಗಳಿಗೆ ಮಾದರಿಯಾಗಬೇಕು. ಬಾಲಿವುಡ್ ನಟ ಅಮೀರ್ ಖಾನ್ ನೇತೃತ್ವದ ಪಾನಿ ಫೌಂಡೇಶನ್ 'ವಾಟರ್ ಕಪ್' ಎಂಬ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯ ಮುಖ್ಯ ಉದ್ದೇಶವೆನೆಂದರೆ.. ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನ ಸಂರಕ್ಷಿಸುವುದು. ಈ ಕಾರ್ಯದಲ್ಲಿ ಸಫಲಗೊಂಡು ಸೈ ಎನ್ನಸಿಕೊಂಡಿದ್ದು ಈ ವೇಳು ಗ್ರಾಮ.
ಈ ವೇಳು ಗ್ರಾಮದ ಜನರು ಸಂರಕ್ಷಿಸಿದ್ದ ನೀರು ಬರೋಬ್ಬರಿ- 27,360 ಕೋಟಿ ಲೀಟರ್. ಅದು ಎಷ್ಟೆಂದರೆ 2.37 ಕೋಟಿ ಟ್ಯಾಂಕರ್'ಗಳಷ್ಟು ನೀರು. ಒಂದು ಕಾಲದಿಂದ ಬರದಿಂದ ಕಂಗೆಟ್ಟಿದ್ದ ಗ್ರಾಮ ಈಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲೀಗ ನೀರಿನ ಅಭಾವವೇ ಇಲ್ಲ. ಈ ಹಳ್ಳಿಯ ಸಾಧನೆ ಹಾಗೂ ನಟ ಅಮೀರ್ ಖಾನ್ ಅವರ ಕಾಳಜಿಗೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಕೂಡ ಬೆಂಬಲ ನೀಡಿದ್ದಾರೆ.
ಇದೆಲ್ಲಾ ಸಾಧ್ಯವಾಗಿದ್ದು, ಜನರ ಇಚ್ಛಾಶಕ್ತಿಯಿಂದ, ಪಾನಿ ಫೌಂಡೇಶನ್'ನಿಂದ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯ ನೀರು ನದಿ ಸೇರಿ ಅಲ್ಲಿಂದ ಸಮುದ್ರದ ಪಾಲಾಗುತ್ತದೆ. ಅದನ್ನ ನಾವು ಪುನಃ ತರಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ವೇಳು ಗ್ರಾಮ ನಮಗೆ ಮಾದರಿಯಾಗಬೇಕು.
ನಮ್ಮ ಸ್ಯಾಂಡಲ್ವುಡ್ ನಟ ಯಶ್ ಕೂಡ ಇಂತಹದ್ದೊಂದು ಮಾದರಿಯನ್ನು ನಮಗೆ ಹಾಕಿಕೊಟ್ಟಿರುವುದನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಿದೆ. ನೀರಿನಿಂದ ಕಂಗೆಟ್ಟಿರುವ ಹಳ್ಳಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವುದರಿಂದ ಆರಂಭವಾದ ಇವರ ಜಲಸೇವೆ ಈಗ ಕೆರೆಗಳ ಹೂಳೆತ್ತಿ, ಕೆರೆ ಸಂರಕ್ಷಣೆವರೆಗೂ ಕಾಯಕ ಮುಂದುವರಿದಿದೆ.
ನಮ್ಮ ಜನಪ್ರತಿನಿಧಿಗಳು, ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನ ಜನತೆಗೆ ತಲುಪಿಸಿದ್ರೆ ಮುಂದೊಂದು ದಿನ ರಾಜ್ಯದಲ್ಲಿ ದೊಡ್ಡ ಜಲಕ್ರಾಂತಿಯಾಗುವುದಲ್ಲಿ ಎರಡು ಮಾತಿಲ್ಲ.
ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.