ಬಾತುಕೋಳಿ ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ವೃದ್ಧಿ: ತ್ರಿಪುರ ಸಿಎಂ

By Web DeskFirst Published Aug 29, 2018, 10:53 AM IST
Highlights

ಬಾತುಕೋಳಿ ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ವೃದ್ಧಿ: ತ್ರಿಪುರ ಸಿಎಂ |ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ: ತಜ್ಞರು  

ಅಗರ್ತಲ (ಆ. 29): ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ವಿಚಿತ್ರ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ಇದೀಗ ಮತ್ತೊಮ್ಮೆ ಅಂತಹುದೇ ಹೇಳಿಕೆಯೊಂದನ್ನು ನೀಡಿದ್ದಾರೆ.

ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ಏರಿಕೆಯಾಗಲಿದೆ. ಆದ ಕಾರಣ, ತ್ರಿಪುರದ ಗ್ರಾಮಸ್ಥರಿಗೆ 50 ಸಾವಿರ ಬಾತುಕೋಳಿ ಮರಿಗಳನ್ನು ವಿತರಣೆ ಮಾಡುತ್ತೇನೆ ಎಂದು ಪ್ರಕಟಿಸಿದ್ದಾರೆ.

‘ನೀರಮಹಲ್‌’ ಸುತ್ತ ಸೃಷ್ಟಿಸಲಾಗಿರುವ ಕೃತಕ ಸರೋವರ ರುದ್ರಸಾಗರದಲ್ಲಿ ದೋಣಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಗಳಲ್ಲಿ ಬಾತುಕೋಳಿಗಳು ಈಜಾಡುತ್ತಿದ್ದರೆ, ಅಂತಹ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ವೃದ್ಧಿಯಾಗುತ್ತದೆ. ಇದರಿಂದ ಕೆರೆಗಳಲ್ಲಿರುವ ಮೀನುಗಳಿಗೆ ಹೆಚ್ಚು ಆಮ್ಲಜನಕ ಲಭಿಸುತ್ತದೆ.

ಬಾತುಕೋಳಿಗಳ ತ್ಯಾಜ್ಯದಿಂದ ಮೀನುಗಳಿಗೂ ಅನುಕೂಲವಾಗುತ್ತದೆ. ಸಾವಯವ ರೀತಿಯಲ್ಲಿ ಮೀನುಗಳು ಬೆಳೆಯುತ್ತವೆ. ಆದ ಕಾರಣ 50 ಸಾವಿರ ಬಾತುಕೋಳಿ ಮರಿಗಳನ್ನು ಜನರಿಗೆ ನೀಡುತ್ತೇವೆ. ಇದರಿಂದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗುವುದಲ್ಲದೆ, ಕೆರೆಗಳ ಸೌಂದರ್ಯವೂ ಹೆಚ್ಚುತ್ತದೆ ಎಂದರು.

ತ್ರಿಪುರದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಯತ್ನಿಸುತ್ತಿರುವ ಜುಕ್ತಿಬಾದ್‌ ವಿಕಾಸ ಮಂಚ್‌ ಸಂಘಟನೆ, ಮುಖ್ಯಮಂತ್ರಿಗಳ ಹೇಳಿಕೆಯನ್ನು ಬೇಜವಾಬ್ದಾರಿತನದ್ದು ಎಂದಿದೆ. ಕೆರೆಗಳಲ್ಲಿ ಬಾತುಕೋಳಿ ಇದ್ದರೆ ಆಮ್ಲಜನಕ ವೃದ್ಧಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ ಎಂದು ತಿಳಿಸಿದೆ.

 

click me!