ಕಾಂಗ್ರೆಸ್‌ ಹಸ್ತದಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ

First Published Apr 25, 2018, 9:44 AM IST
Highlights

ಕಾಂಗ್ರೆಸ್‌ನ ಹಸ್ತದಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ, ನಾವಿದನ್ನು ತೋರಿಸಲು ಸಿದ್ಧರಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

ಅಲೀಗಢ : ಕಾಂಗ್ರೆಸ್‌ನ ಹಸ್ತದಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ, ನಾವಿದನ್ನು ತೋರಿಸಲು ಸಿದ್ಧರಿದ್ದೇವೆ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ. ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಇಕ್ಕಟ್ಟಿನ ಪ್ರಶ್ನೆಗೆ ಖುರ್ಷಿದ್‌ ಈ ರೀತಿಯ ಉತ್ತರ ನೀಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.

ಅಲಿಗಢ ಮುಸ್ಲಿಂ ವಿವಿಯಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಸಲ್ಮಾನ್‌ ಖುರ್ಷಿದ್‌ ಪಾಲ್ಗೊಂಡಿದ್ದರು. ಆಗ ವಿದ್ಯಾರ್ಥಿಯೊಬ್ಬ, ‘ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಮಲಿಯಾನಾ, ಮುಜಾಫರನಗರ್‌, ಹಸನ್‌ಪುರ ಸೇರಿದಂತೆ ನಾನಾ ಕಡೆ ದಂಗೆ ನಡೆದಿವೆ. ನಂತರ ನೀವು ಬಾಬ್ರಿ ಮಸೀದಿಯ ಗೇಟು ತೆರೆದು ಅಲ್ಲಿ ವಿಗ್ರಹ ಇರಿಸಲು ಅವಕಾಶ ಕೊಟ್ಟಿರಿ.

ಅದರಿಂದಾಗಿ ಬಾಬ್ರಿ ಮಸೀದಿಯೇ ಧ್ವಂಸವಾಯಿತು. ಒಟ್ಟಿನಲ್ಲಿ ಕಾಂಗ್ರೆಸ್‌ನ ಕೈಮೇಲೆ ಮುಸ್ಲಿಮರ ರಕ್ತದ ಕಲೆಗಳಿವೆ. ಅದನ್ನು ಯಾವ ಶಬ್ದಗಳಿಂದ ತೊಳೆದುಕೊಳ್ಳುತ್ತೀರಿ?’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಖುರ್ಷಿದ್‌, ‘ಇದು ರಾಜಕೀಯ ಪ್ರಶ್ನೆ. ನಮ್ಮ ಕೈಗಳಲ್ಲಿ ರಕ್ತದ ಕಲೆಗಳಿವೆ. ನಾನೂ ಕಾಂಗ್ರೆಸಿಗನಾಗಿರುವುದರಿಂದ ಇದನ್ನು ಹೇಳುತ್ತಿದ್ದೇನೆ, ನಮ್ಮ ಕೈಗಳಲ್ಲಿ ಮುಸ್ಲಿಮರ ರಕ್ತದ ಕಲೆಗಳಿವೆ. ಹಾಗಂತ ನಿಮ್ಮ ಮೇಲೆ ಯಾರಾದರೂ ದಾಳಿ ನಡೆಸಿದರೆ ನಿಮ್ಮನ್ನು ರಕ್ಷಿಸಲು ನಾವು ಬರಬಾರದೇ? ನಮ್ಮ ಕೈಗಳಲ್ಲಿರುವ ರಕ್ತದ ಕಲೆಗಳನ್ನು ತೋರಿಸಲು ನಾವು ಸಿದ್ಧರಿದ್ದೇವೆ. ಏಕೆಂದರೆ ನೀವೂ ನಿಮ್ಮ ಕೈಗಳನ್ನು ರಕ್ತ ಮಾಡಿಕೊಳ್ಳಬಾರದು. ನೀವು ಅವರ ಮೇಲೆ ದಾಳಿ ಮಾಡಿದರೆ ನಿಮ್ಮ ಕೈಯೇ ರಕ್ತವಾಗುತ್ತದೆ. ಇತಿಹಾಸದಿಂದ ಏನಾದರೂ ಕಲಿಯಿರಿ. 10 ವರ್ಷದ ನಂತರ ನೀವು ಇಲ್ಲಿಗೆ ಬಂದರೆ ನಿಮಗೂ ಇದೇ ಪ್ರಶ್ನೆ ಎದುರಾಗುವ ಸಂದರ್ಭ ತಂದುಕೊಳ್ಳಬೇಡಿ’ ಎಂದು ಹೇಳಿದರು.

ಖುರ್ಷಿದ್‌ ಹೇಳಿಕೆಯಿಂದ ಕಾಂಗ್ರೆಸ್‌ ಪಕ್ಷ ಅಂತರ ಕಾಯ್ದುಕೊಂಡಿದ್ದು, ತಾನು ಇದನ್ನು ಒಪ್ಪುವುದಿಲ್ಲ ಎಂದು ಹೇಳಿದೆ. ‘ಖುರ್ಷಿದ್‌ ಹೇಳಿಕೆ ವೈಯಕ್ತಿಕವಾದುದು. ಪಕ್ಷ ಇದನ್ನು ಒಪ್ಪುವುದಿಲ್ಲ’ ಎಂದು ಪಕ್ಷದ ವಕ್ತಾರ ಪಿ.ಎಲ್‌.ಪುನಿಯಾ ಹೇಳಿದ್ದಾರೆ.

click me!