
ಬೆಂಗಳೂರು (ಜ.28): ಬೆಂಗಳೂರು ವಿಶ್ವವಿದ್ಯಾಲಯದ 203 ಪ್ರತಿಭಾವಂತ ವಿದ್ಯಾರ್ಥಿಗಳ ಪೈಕಿ 103 ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಬದಲು, ಚಿನ್ನದ ಪದಕ ವಿಜೇತರು ಎಂಬ ಪ್ರಮಾಣಪತ್ರವನ್ನು ಮಾತ್ರ ನೀಡಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ವಿಶ್ವವಿದ್ಯಾಲಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಘಟಿಕೋತ್ಸವ ಸಮಾರಂಭದಲ್ಲಿ ನಡೆಯಿತು.
ಅಸಮಾಧಾನಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಕ್ರಿಯೆ ನೀಡಿದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, ವಿವಿಯಲ್ಲಿ ಈ ಹಿಂದೆ ಠೇವಣಿಯಾಗಿಟ್ಟಿರುವ ಹಣದಿಂದ ಬರುವ ಬಡ್ಡಿಯಲ್ಲಿ ಪದಕ ಪ್ರದಾನ ಮಾಡಬೇಕಿದೆ. ಈ ಹಣದಲ್ಲಿ ಚಿನ್ನದ ಪದಕ ಪ್ರದಾನ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ಪ್ರಮಾಣಪತ್ರದಲ್ಲಿ ಮಾತ್ರ ಚಿನ್ನದ ಪದಕ ವಿಜೇತ ಎಂದು ನೀಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಹಿಂದಿನಿಂದ ನಡೆದುಕೊಂಡು ಬಂದಿರುವಂತೆಯೇ ಈಗಲೂ ನಡೆಸಿಕೊಂಡು ಹೋಗುತ್ತಿದ್ದೇವೆ. ದಾನಿಗಳು .500ರಿಂದ .5 ಲಕ್ಷದವರೆಗೆ ಠೇವಣಿ ಇಟ್ಟಿದ್ದಾರೆ. ಇದರಿಂದ ಬರುವ ಬಡ್ಡಿ ಹಣದಲ್ಲಿ ಎಲ್ಲರಿಗೂ ಚಿನ್ನದ ಪದಕ ವಿತರಿಸುವುದು ಕಷ್ಟ. ಕಡೇ ಪಕ್ಷ ಪ್ರಮಾಣಪತ್ರದಲ್ಲಾದರೂ ಇರಲಿ ಎಂಬ ಉದ್ದೇಶದಿಂದ ಚಿನ್ನದ ವಿಜೇತರು ಎಂದು ಮುದ್ರಿಸುತ್ತಿದ್ದೇವೆ. 20 ಗ್ರಾಂ. ಬೆಳ್ಳಿಗೆ 1.3 ಗ್ರಾಂ ಚಿನ್ನದ ಲೇಪನ ಮಾಡಿರುವ ಪದಕಕ್ಕೆ .3,735 ವೆಚ್ಚವಾಗಲಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಪದಕ ಬೇಕೇ ಬೇಕು ಎನಿಸಿದರೆ, ಪ್ರಮಾಣಪತ್ರದ ಹಣದ ಜೊತೆಗೆ ಹೆಚ್ಚುವರಿ ಹಣವನ್ನು ಸರಿದೂಗಿಸಿದರೆ ಪದಕ ಪ್ರದಾನ ಮಾಡುತ್ತೇವೆ ಎಂಬ ಉತ್ತರ ನೀಡಿದರು.
ಕುಲಪತಿಗಳ ಉತ್ತರದಿಂದ ಅತೃಪ್ತಗೊಂಡ ಪೋಷಕರು ಮತ್ತು ವಿದ್ಯಾರ್ಥಿಗಳು ಗೊಣಗುತ್ತಲೇ ಕಾರ್ಯಕ್ರಮದಿಂದ ಹಿಂತಿರುಗಿದರು. ಮಗಳಿಗೆ ಚಿನ್ನದ ಪದಕ ಪ್ರದಾನ ಕ್ಷಣಕ್ಕಾಗಿ ಚನ್ನಪಟ್ಟಣದಿಂದ ಬಂದಿದ್ದ ಪೋಷಕರೊಬ್ಬರು, ನನ್ನ ಮಗಳು ರಾಜ್ಯಪಾಲರಿಂದ ಪದಕ ಸ್ವೀಕರಿಸಲಿದ್ದಾಳೆ. ಆ ಸಂದರ್ಭವನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲದಿಂದ ಕಾರ್ಯಕ್ರಮಕ್ಕೆ ಬಂದಿದ್ದೆ. ಕೊನೇ ಕ್ಷಣದಲ್ಲಿ ಪ್ರಮಾಣಪತ್ರವಷ್ಟೇ ಸಿಕ್ಕಿದೆ. ವಿವಿ ನಿರ್ಧಾರ ತುಂಬಾ ಬೇಸರ ಮೂಡಿಸಿದೆ. ಚಿನ್ನದ ಪದಕ ನೀಡಲು ಸಾಧ್ಯವಾಗದಿದ್ದಲ್ಲಿ ರಾರಯಂಕ್ ಪದವಿಯನ್ನಷ್ಟೇ ನೀಡಲಿ. ಚಿನ್ನದ ಪದಕವೆಂಬ ಆಸೆ ತೋರಿಸಿ ಮೋಸ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಚಿನ್ನದ ಪದಕ ವಂಚಿತ ಸೇಂಟ್ ಜೋಸೆಫ್ ಕಾಲೇಜು ವಾಣಿಜ್ಯ ವಿಭಾಗ ವಿದ್ಯಾರ್ಥಿನಿ ಪ್ರತಿಮಾ ‘ಅಂತಾರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದೇನೆ. ಇದೀಗ ವಿಶ್ವವಿದ್ಯಾಲಯದಿಂದ ಮತ್ತೊಂದು ಪದಕ ಸಿಗಲಿದೆ ಎಂಬ ಕನಸು ಕಂಡಿದ್ದೆ. ನನ್ನ ಸ್ನೇಹಿತರು ಪದಕ ತೋರಿಸು ಎಂದರೆ ಏನು ಮಾಡಲಿ? ವಿವಿ ಈ ರೀತಿಯ ತೀರ್ಮಾನ ಕೈಗೊಳ್ಳಬಾರದಿತ್ತು್ತ' ಬೇಸರದಿಂದ ಹೇಳಿದರು.
ಪದಕ ಪ್ರದಾನ: ರಾಜ್ಯಪಾಲ ವಿ.ಆರ್. ವಾಲಾ ಪದಕಗಳ ಪ್ರದಾನ ಮಾಡಿದರು. ಸ್ನಾತಕೋತ್ತರ ವಿಭಾಗದಲ್ಲಿ ಸೌಜನ್ಯ ಎಸ್.ಕೆ. ಅವರಿಗೆ 8 ಚಿನ್ನದ ಪದಕ, ಕಾಶೀಫ ಎಫ್ 5 ಚಿನ್ನದ ಪದಕ ವಿತರಿಸಿದರು. ಪದವಿ ವಿಭಾಗದಲ್ಲಿ ಶ್ರೇತಿ ಗರ್ಗ್- 4, ನಾಗರಾಜ- 6, ಎಸ್.ಬಿ. ಲಾವಣ್ಯ- 4, ಕೆ.ಎಲ್. ಜಗದೀಶ್ ಕುಮಾರ್- 4, ಸುಮೇರ ತನ್ವೀರ್ 3 ಚಿನ್ನದ ಪದಕ ವಿತರಿಸಿದರು. ನ್ಯಾಕ್ ನಿರ್ದೇಶಕ ಪ್ರೊ. ಧೀರೇಂದ್ರ ಪಾಲ್ ಸಿಂಗ್ ಘಟಿಕೋತ್ಸವ ಭಾಷಣ ಮಾಡಿದರು. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಕುಲಪತಿ ಪ್ರೊ. ಬಿ. ತಿಮ್ಮೇಗೌಡ, ಕುಲಸಚಿವ ಪ್ರೊ. ಕೆ.ಎನ್. ನಿಂಗೇಗೌಡ ಉಪಸ್ಥಿತರಿದ್ದರು.
ಮೆಕಾನಿಕಲ್ ಇಂಜಿನಿಯರಿಂಗ್'ನಲ್ಲಿ 4 ಚಿನ್ನದ ಪದಕಗಳನ್ನು ಪಡೆದ ಜಗದೀಶ್ ಕುಮಾರ್ ಕೆ.ಎಲ್.
ಯಾಕಾಗಿ ಚಿನ್ನದ ಪದಕ ಪ್ರದಾನ ಮಾಡಿಲ್ಲ?:
ಬೆಂಗಳೂರು ವಿವಿಯಲ್ಲಿ ಬಹು ಹಿಂದೆ 500 ರು.ನಿಂದ 2 ಲಕ್ಷ ರು. ವರೆಗೆ ಚಿನ್ನದ ಪದಕ ನೀಡಲು ಠೇವಣಿ ಇಟ್ಟಿರುವ ದಾನಿಗಳು. ಈ ಠೇವಣಿಯ ಬಡ್ಡಿ ಹಣದಲ್ಲಿ ಕೆಲವರಿಗೆ ಮಾತ್ರವಷ್ಟೇ ಚಿನ್ನದ ಪದಕ ನೀಡಲು ಸಾಧ್ಯ. ಅಲ್ಪ ಬಡ್ಡಿ ಠೇವಣಿಗೆ ಪದಕ ನೀಡಲು ಸಾಧ್ಯವಿಲ್ಲ.
ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ:
ಹುಟ್ಟಿನಿಂದಲೇ ಅಂಧರಾಗಿರುವ ಎಂ. ವೆಂಕಟೇಶ್, ಘಟಿಕೋತ್ಸವದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ದೃಷ್ಟಿಕಳೆದುಕೊಂಡಿದ್ದರೂ ಸಹ ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿ ಪದಕ ಪಡೆದುಕೊಂಡಿದ್ದಾರೆ. ಆಚಾರ್ಯ ಪಾಠಶಾಲಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡಲು ಪ್ರತಿ ದಿನ ಇಂದಿರಾನಗರದಿಂದ ಎನ್.ಆರ್. ಕಾಲೋನಿಗೆ ಪ್ರಯಾಣ ಮಾಡುತ್ತಿದ್ದರು. ಕೋಲಾರ ಜಿಲ್ಲೆಯ ತಲಗುಂದದಲ್ಲಿ ಪ್ರೌಢಶಾಲೆ ಮುಗಿಸಿದ ಬಳಿಕ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿದ್ದುಕೊಂಡೇ ಎಂಎ ಅರ್ಥಶಾಸ್ತ್ರ ವ್ಯಾಸಂಗ ಮಾಡುತ್ತಿದ್ದೇನೆ. ಮುಂದೆ ಎಲ್‌ಎಲ್‌ಬಿ ಮಾಡಿ ವಕೀಲಿ ವೃತ್ತಿ ಆರಂಭಿಸಬೇಕೆಂಬ ಹಂಬಲ ಹೊಂದಿದ್ದೇನೆ ಎಂದು ವೆಂಕಟೇಶ್ ತಿಳಿಸಿದರು. ಅಂಗವೈಕಲ್ಯರಿಗೆ ಉಚಿತ ವಸತಿ ಸೌಲಭ್ಯ ನೀಡಬೇಕಾದ ವಿವಿ ಈ ಸೌಲಭ್ಯ ಕಲ್ಪಿಸಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆಲುಗಿನಲ್ಲಿ ಚಿನ್ನ:
ಪೊಲಿಯೋನಿಂದ ಬಳಲುತ್ತಿರುವ ಬೊರೆಡ್ಡಿ ನಾಗಮಲ್ಲೇಶ್ವರಿ ಎಂಬ ವಿದ್ಯಾರ್ಥಿನಿ ಎಂಎ ತೆಲುಗಿನಲ್ಲಿ ಹೆಚ್ಚಿನ ಅಂಕಗಳಿಸುವ ಮೂಲಕ ಚಿನ್ನದ ಪದಕ ಪಡೆದಿದ್ದಾರೆ. ಆಂಧ್ರ ಮೂಲದ ನಾಗಮಲ್ಲೇಶ್ವರಿ ಅಂಗವಿಕಲರಿಗೆ ನೀಡುವ ಮಾಸಿಕ ಶಿಷ್ಯವೇತನ .1,500 ಪಡೆದು ಹೆಚ್ಚಿನ ಅಂಕಗಳಿಸಿದ್ದಾರೆ. ತಂದೆ-ತಾಯಿ ಕೃಷಿಕರು. ಮುಂದೆ ಪಿಎಚ್‌ಡಿ ಮಾಡಿ ಪ್ರಾಧ್ಯಾಪಕಿಯಾಗುವ ಗುರಿ ಹೊಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.