
ಮೆಕ್ಸಿಕೋ(ಸೆ.29): ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ‘‘ಮೂವರು ಹೆತ್ತವರ’’ ಮೂಲಕ ಮಗುವೊಂದಕ್ಕೆ ಜನ್ಮನೀಡಲಾಗಿದೆ. ಮೂರು ವ್ಯಕ್ತಿಗಳ ಡಿಎನ್‌ಎಯನ್ನು ಬಳಸಿಕೊಂಡು ನೂತನ ತಂತ್ರಜ್ಞಾನದ ಮೂಲಕ ಹೊಸ ಜೀವವೊಂದನ್ನು ಸೃಷ್ಟಿಸಲಾಗಿದೆ. ಇದನ್ನು ವೈದ್ಯರು ‘ವೈದ್ಯಕೀಯ ಇತಿಹಾಸದಲ್ಲೇ ಕ್ರಾಂತಿ’ ಎಂದು ಬಣ್ಣಿಸಿದ್ದರೆ, ಟೀಕಾಕಾರರು, ‘ದೇವರ ಜತೆಗೆ ಆಟ’ ಎಂದು ಕಿಡಿಕಾರಿದ್ದಾರೆ.
ಈ ವಿವಾದಾತ್ಮಕ ತಂತ್ರಜ್ಞಾನದ ಮೂಲಕ ಅಪರೂಪದ ಆನುವಂಶಿಕ ಸಮಸ್ಯೆ ಹೊಂದಿದ್ದ ಜೋರ್ಡಾನ್‌ನ ದಂಪತಿಗೆ ಆರೋಗ್ಯವಂತ ಮಗುವನ್ನು ಕೊಡುಗೆಯಾಗಿ ನೀಡಲಾಗಿದೆ. ಯುಕೆಯಲ್ಲಿ ಮಾತ್ರವೇ ಈ ವಿಧಾನಕ್ಕೆ ಕಾನೂನಾತ್ಮಕ ಅನುಮತಿಯಿದೆ. ಆದರೆ, ಅಮೆರಿಕ ಸೇರಿದಂತೆ ಬಹುತೇಕ ದೇಶಗಳಲ್ಲಿ ಇದಕ್ಕೆ ನಿಷೇಧವಿದೆ. ಹೀಗಾಗಿ, ಅಮೆರಿಕದ ವೈದ್ಯರ ತಂಡವು ಮೆಕ್ಸಿಕೋಗೆ ತೆರಳಿ, ಈ ವಿಧಾನವನ್ನು ಯಶಸ್ವಿಯಾಗಿ ನೆರವೇರಿಸಿದೆ ಎಂದು ‘ದಿ ನ್ಯೂ ಸೈಂಟಿಸ್ಟ್’ ವರದಿ ಮಾಡಿದೆ.
ಈಗ ಈ ಗಂಡು ಮಗುವಿಗೆ 5 ತಿಂಗಳಾಗಿದ್ದು, ಆರೋಗ್ಯಯುತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಾಯಿಗೆ ಅಪರೂಪದ ಆನುವಂಶಿಕ ಕಾಯಿಲೆಯಿತ್ತು. ಇದು ಮಗುವಿಗೂ ಹರಡುವ ಕಾರಣ, ಆಕೆ ತನ್ನ ಮೊದಲ ಎರಡು ಮಕ್ಕಳನ್ನೂ ಕಳೆದುಕೊಂಡಿದ್ದಳು. ಜತೆಗೆ, 4 ಬಾರಿ ಗರ್ಭಪಾತವೂ ಆಯಿತು. ಕೊನೆಯ ಭರವಸೆಯೆಂಬಂತೆ, ನ್ಯೂಯಾರ್ಕ್ ಸಿಟಿಯ ನ್ಯೂ ಹೋಪ್ ರ್ಟಿಲಿಟಿ ಸೆಂಟರ್‌ನ ವೈದ್ಯರ ತಂಡವನ್ನು ಭೇಟಿಯಾದರು. ವೈದ್ಯರು ಹೊಸ ‘3 ಪೇರೆಂಟ್ ಟೆಕ್ನಿಕ್’ ಬಳಸುವ ನಿರ್ಧಾರಕ್ಕೆ ಬಂದರು. ಅದರಂತೆ, ಕಳೆದ ಏಪ್ರಿಲ್ 6ರಂದು ಮಗು ಜನ್ಮತಾಳಿತು.
ಹೇಗೆ ನಡೆಯಿತು ಪ್ರಕ್ರಿಯೆ? ಮೊದಲು ತಾಯಿ ಮತ್ತು ದಾನಿಯ ಅಂಡಾಣು, ತಂದೆಯ ವೀರ್ಯವನ್ನು ಲಿತಗೊಳಿಸಲಾಯಿತು. ನಂತರ, ತಾಯಿಯ ಅಂಡಾಣುವಿನ ಕೋಶಕೇಂದ್ರವನ್ನು(ಬೀಜಾಣು) ಹೊರತೆಗೆದು, ಅದನ್ನು ದಾನಿಯ ಅಂಡಾಣುವಿನೊಳಗೆ ಸೇರಿಸಲಾಯಿತು (ಇದಕ್ಕೂ ಮೊದಲು ದಾನಿಯ ಅಂಡಾಣುವಿನಲ್ಲಿದ್ದ ಕೋಶಕೇಂದ್ರವನ್ನು ತೆಗೆದುಹಾಕಲಾಗಿತ್ತು). ಪರಿಣಾಮ, ತಾಯಿಯ ನ್ಯೂಕ್ಲಿಯರ್ ಡಿಎನ್‌ಎ ಮತ್ತು ದಾನಿಯ ಮೈಟೋಕಾಂಡ್ರಿಯಲ್ ಡಿಎನ್‌ಎ ಸೇರಿಕೊಂಡು ಹೊಸ ಅಂಡಾಣು ಸೃಷ್ಟಿಯಾಯಿತು. ಇದನ್ನು ತಂದೆಯ ವೀರ್ಯದೊಂದಿಗೆ ಲಿತಗೊಳಿಸಲಾಯಿತು. ಇದೇ ವಿಧಾನವನ್ನು ಬಳಸಿ ಒಟ್ಟು 5 ಭ್ರೂಣಗಳನ್ನು ಸೃಷ್ಟಿಸಲಾಯಿತು. ಈ ಪೈಕಿ ಒಂದು ಭ್ರೂಣವಷ್ಟೇ ಸಹಜವಾಗಿ ಬೆಳೆದ ಕಾರಣ, ಅದನ್ನು ತಾಯಿಯ ಗರ್ಭದೊಳಗೆ ಸೇರಿಸಲಾಯಿತು. 9 ತಿಂಗಳ ಬಳಿಕ ಮಗು ಜನ್ಮತಾಳಿತು. ಅಮೆರಿಕದಲ್ಲಿ ಇಂಥ ಪ್ರಕ್ರಿಯೆಗೆ ಅನುಮತಿ ಇಲ್ಲದ ಕಾರಣ, ಮೆಕ್ಸಿಕೋಗೆ ತೆರಳಿ ಮಗುವನ್ನು ಪಡೆಯುವ ದಂಪತಿಯ ಆಸೆ ಪೂರೈಸಲಾಯಿತು ಎಂದಿದ್ದಾರೆ ಡಾ. ಝಾಂಗ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.