ಅಧಿಕಾರಿಗಳಿಗೆ ಪೇಮೆಂಟ್‌ ಸೀಟ್‌ ಇಲ್ಲ, ಮೆರಿಟ್‌ ಸೀಟ್‌ ಮಾತ್ರ: ಸಿಎಂ

By Web DeskFirst Published Oct 24, 2018, 8:04 AM IST
Highlights

ಅಧಿಕಾರಿಗಳಿಗೆ ಪೇಮೆಂಟ್‌ ಸೀಟ್‌ ಇಲ್ಲ, ಮೆರಿಟ್‌ ಸೀಟ್‌ ಮಾತ್ರ: ಸಿಎಂ |  ವರ್ಗಾವಣೆಯಲ್ಲಿ ಕಲೆಕ್ಷನ್‌ ದಂಧೆ ನಡೆಯುತ್ತಿದೆಯೆಂಬ ಬಿಜೆಪಿ ಆರೋಪ ಸುಳ್ಳು |  ಚೆನ್ನಾಗಿ ಕೆಲಸ ಮಾಡುವವರಿಗೆ ಸೂಕ್ತ ಹುದ್ದೆ 
 

ಬೆಂಗಳೂರು (ಅ. 24): ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ನನ್ನ ಕಚೇರಿಯಲ್ಲಿ ಯಾವುದೇ ರೀತಿಯ ಪೇಮೆಂಟ್‌ ಸೀಟಿಗೆ ಅವಕಾಶ ನೀಡಿಲ್ಲ. ಬದಲಿಗೆ ಮೆರಿಟ್‌ ಅಧಾರದ ಮೇಲೆ ಅರ್ಹ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿಗೆ ಟಾಂಗ್‌ ಕೊಟ್ಟಿದ್ದಾರೆ.

ವರ್ಗಾವಣೆಯಲ್ಲಿ ಕಲೆಕ್ಷನ್‌ ದಂಧೆ ನಡೆಯುತ್ತಿದೆ ಎಂದು ಪ್ರತಿಪಕ್ಷವು ಆರೋಪ ಮಾಡುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಪೇಮೆಂಟ್‌ ಸೀಟಿನಲ್ಲಿ ವರ್ಗಾವಣೆ ಮಾಡುತ್ತಿಲ್ಲ. ಏನಿದ್ದರೂ ಮೆರಿಟ್‌ ಆಧಾರದ ಮೇಲೆ ವರ್ಗಾವಣೆ ಮಾಡಲಾಗುತ್ತಿದೆ. ದಕ್ಷ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅರ್ಹ ಅಧಿಕಾರಿಗಳಿಗೆ ಸೂಕ್ತ ಹುದ್ದೆಗಳು ಲಭಿಸಲಿವೆ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ, ದಕ್ಷತೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಬೆಂಗಳೂರಿನಲ್ಲಿನ ಡ್ಯಾನ್ಸ್‌ ಬಾರ್‌ಗಳಲ್ಲಿ ಒಂದು ರಾತ್ರಿ ಸುಮಾರು ಐದು ಕೋಟಿ ರು. ಸಂಗ್ರಹವಾಗುವುದು ಗೊತ್ತಿದೆ.

ಹೈದರಾಬಾದ್‌, ಮುಂಬೈನಿಂದ ವಿಶೇಷ ವಿಮಾನದಲ್ಲಿ ಕರೆತಂದು ಮಟ್ಕಾ ದಂಧೆಗಳನ್ನು ನಡೆಸಲಾಗುತ್ತಿದೆ. ಇದನ್ನೆಲ್ಲ ಮಟ್ಟಹಾಕಿ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದ್ದು, ಮುಕ್ತವಾಗಿ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ಇತರೆ ಸೂಕ್ಷ್ಮ ಜಿಲ್ಲೆಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿದ್ದು, ಸಮಾಜ ಘಾತುಕ ಶಕ್ತಿಗಳು ಅಮಾಯಕರ ಮೇಲೆ ದುಷ್ಕೃತ್ಯಗಳನ್ನು ಎಸಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅವುಗಳ ನಿರ್ವಹಣೆಗೆ ಸುಮಾರು ಎರಡು ಸಾವಿರ ಕೋಟಿ ರು. ಖರ್ಚು ಮಾಡಲು ಸರ್ಕಾರ ಮುಂದಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಎಷ್ಟೇ ಒತ್ತಡ ಬಂದರೂ ಮಣಿಯದಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಭ್ರಷ್ಟಅಧಿಕಾರಿಗಳನ್ನು ಸರ್ಕಾರ ರಕ್ಷಣೆ ಮಾಡುವುದಿಲ್ಲ. ಲೋಕಾಯುಕ್ತ ಸಂಸ್ಥೆಯಿಂದ ಬರುವ ಶಿಫಾರಸುಗಳ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

 

click me!