
ಪಣಜಿ (ಜ.11): ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧಿಕರಣದ ಅಂತಿಮ ವಿಚಾರಣೆ ಫೆ.6ಕ್ಕೆ ಆರಂಭವಾಗಲಿದೆ. ಈ ವೇಳೆ ಗೋವಾ ಸರ್ಕಾರವು ‘ಈ ವಿಷಯದಲ್ಲಿ ಯಾವುದೇ ಮಾತುಕತೆ ಸಾಧ್ಯವಿಲ್ಲ’ ಎಂದು ಪ್ರಮಾಣಪತ್ರ ಸಲ್ಲಿಸಲಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾವು ನೀಡಿದ್ದ ‘ಮಾತುಕತೆಯ ಭಾಷೆ’ ಮರೆತು ಉಲ್ಟಾ ಹೊಡೆದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ‘ನ್ಯಾಯಾಧಿಕರಣದಲ್ಲೇ ನಾವು ಹೋರಾಟ ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ
ಪರರ್ರಿಕರ್‌ಗೆ ಅವರು ಮಾತನಾಡುವ ವೇಳೆ ‘ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಭೇಟಿ ವೇಳೆ ಮಹದಾಯಿ ಪ್ರಸ್ತಾಪ ವಾಯಿತೇ?’ ಎಂದು ಪತ್ರಕರ್ತರು ಪ್ರಶ್ನಿಸಿದರು. ಆಗ ಉತ್ತರಿಸಿದ ಅವರು, ‘ಮಹದಾಯಿ ವಿವಾದವನ್ನು ಸುದ್ದಿಗೋಸ್ಕರ ಸೃಷ್ಟಿಸಿದ್ದೇ ನೀವು (ಪತ್ರಕರ್ತರು). ನದಿ ನೀರು ಹಂಚಿಕೆ ವಿವಾದವು ನ್ಯಾಯಾಧಿಕರಣದ ಮುಂದಿದೆ. ಅಲ್ಲಿಯೇ ನಾವು ಹೋರಾಡುತ್ತೇವೆ’ ಎಂದು ಹೇಳಿದರು.
ಮಾತುಕತೆ ಇಲ್ಲ- ಪ್ರಮಾಣಪತ್ರ: ಈ ನಡುವೆ, ಮಹದಾಯಿ ವಿವಾದದಲ್ಲಿ ಗೋವಾ ಸರ್ಕಾರದ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಆತ್ಮಾರಾಮ ನಾಡಕರ್ಣಿ ಅವರು, ಫೆ.6ರಂದು ನ್ಯಾಯಾಧಿಕರಣದ ಅಂತಿಮ ವಿಚಾರಣೆಯಲ್ಲಿ, ‘ಮಾತುಕತೆಯ ಮೂಲಕ ವಿವಾದ ಇತ್ಯರ್ಥ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.
ಮಹದಾಯಿ ವಿಷಯದಲ್ಲಿ ವಾದ ಮಾಡಲು ಗೋವಾ ವಕೀಲರ 3 ತಂಡಗಳು ಕಾರ್ಯನಿರತವಾಗಿವೆ. ಒಂದು ತಂಡ ಪರಿಸರ ವಿಷಯದಲ್ಲಿ ಇನ್ನೊಂದು ತಂಡ ನೀರಿನ ಸಮತೋಲನ ವಿಷಯದಲ್ಲಿ ಹಾಗೂ 3ನೇ ತಂಡ ನದಿ ನೀರಿನ ಅಂತರ್ ಪಾತ್ರ ವರ್ಗಾವಣೆ ವಿಷಯದಲ್ಲಿ ವಾದ ಮಾಡಬೇಕಾದ ಅಂಶಗಳನ್ನು ಸಿದ್ಧಪಡಿಸುತ್ತಿದೆ. ವಿದೇಶೀ ಜಲ ಕಾನೂನುಗಳ ಗಹನ ಅಧ್ಯಯನ ನಡೆದಿದೆ ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.