
ಪಿಟಿಐ ವರದಿ
ನವದೆಹಲಿ: ಪ್ರಧಾನಿ ಮೋದಿ ಅವರ ನೋಟು ಅಮಾನ್ಯ ನಿರ್ಧಾರವು ನಿರಂಕುಶಾಧಿಕಾರವಾಗಿದ್ದು, ಆರ್ಥಿಕತೆಯ ವಿಶ್ವಾಸಾರ್ಹಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ನೊಬೆಲ್ ಪುರಸ್ಕೃತ, ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಹಾರ್ವರ್ಡ್ ವಿವಿಯಿಂದ ‘ಎನ್‌ಡಿಟಿವಿ'ಗೆ ಸಂದರ್ಶನ ನೀಡಿದ ಅವರು, ‘‘ಕಪ್ಪು ಹಣದ ವಿರುದ್ಧ ಹೋರಾಡಲು ನೋಟು ಅಮಾನ್ಯಗೊಳಿಸಿದ ನಿರ್ಧಾರವನ್ನು ಭಾರತೀಯರೆಲ್ಲರೂ ಪ್ರಶಂಸೆ ಮಾಡಬಹುದು. ಆದರೆ, ಇದು ಸರಿಯೇ ಎಂಬುದರ ಬಗ್ಗೆ ಪ್ರಶ್ನೆ ಮಾಡಿಕೊಂಡರೆ, ಇದು ಕಡಿಮೆ ಸಾಧನೆ ಮತ್ತು ಗರಿಷ್ಠ ನೋವಿಗೆ ಕಾರಣವಾಗಿದೆ,'' ಹೇಳಿದ್ದಾರೆ. ಕಳೆದ 20 ವರ್ಷಗಳಿಂದ ಭಾರತದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳವಣಿಗೆಯಾಗುತ್ತಿತ್ತು. ಆದರೆ, ನಿರಂಕುಶವಾದಿತನದ ನಿರ್ಣಯದಿಂದಾಗಿ ಆರ್ಥಿಕತೆ ಕುಂಠಿತಗೊಳ್ಳಲಿದೆ ಎಂದಿದ್ದಾರೆ. ನಗದು ರೂಪವಿರುವ ಶೇ. 6ರಷ್ಟುಕಪ್ಪುಹಣ ನಿಗ್ರಹಕ್ಕಾಗಿ ನೋಟು ಅಮಾನ್ಯ ಘೋಷಿಸಲಾಗಿದ್ದು, ಹಣದ ಮೇಲಿನ ವಿಶ್ವಾಸ ಕುಸಿಯುತ್ತದೆ. ನಾನು ನಿಜವಾಗಿಯೂ ಬಂಡವಾಳಶಾಹಿಗಳ ವಿರೋಧಿಯಲ್ಲ. ಆದರೆ, ನಂಬಿಕೆಯೇ ಬಂಡವಾಳದ ಶಕ್ತಿ ಎಂದು ಅವರು ಹೇಳಿದ್ದಾರೆ. ಕಪ್ಪು ಹಣ ನಿಗ್ರಹಿಸುವ ಪ್ರಧಾನಿ ಅವರ ನಿಲುವನ್ನು ನಾನು ಬೆಂಬಲಿಸುತ್ತೇನೆ. ಆದರೆ, ಅದರ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ. ಸಾರ್ವಜನಿಕರು ತಾವು ಸುಲಿಗೆಕೋರರಲ್ಲ ಎಂಬುದನ್ನು ಸಾಬೀತು ಮಾಡಿಕೊಳ್ಳುವವರೆಗೂ ಅವರಿಗೆ ನಿರ್ಧಿಷ್ಟಹಣ ಪಡೆಯಲಷ್ಟೇ ಎಂಬ ಕಟ್ಟಾಜ್ಞೆಯನ್ನು ಹೊರಡಿಸಬಹುದು ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಹೇಳಿದ್ದಾರೆ.
ನಿತೀಶ್ ವಿರುದ್ಧ ಮಮತಾ ವಾಗ್ದಾಳಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ನಿರ್ಧಾರದ ವಿರುದ್ಧ ಬೃಹತ್ ಸಮರವನ್ನೇ ಸಾರಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಹಾರದ ಪಟನಾದಲ್ಲಿ ಬುಧವಾರ ರ್ಯಾಲಿ ನಡೆಸಿದರು. ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ, ‘‘ವಿಶ್ವಾಸಘಾತುಕರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ,'' ಎಂದು ಹೇಳುವ ಮೂಲಕ ನೋಟು ಅಮಾನ್ಯಕ್ಕೆ ಬೆಂಬಲ ಸೂಚಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್'ಗೆ ಟಾಂಗ್ ನೀಡಿದ್ದಾರೆ. ಆದರೆ, ಭಾಷಣದ ನಡುವೆ ಎಲ್ಲಿಯೂ ನಿತೀಶ್ ಹೆಸರನ್ನು ಅವರು ಉಲ್ಲೇಖಿಸಲಿಲ್ಲ. ಮಂಗಳವಾರವೇ ಪಟನಾಕ್ಕೆ ಆಗಮಿಸಿದ್ದ ಮಮತಾ ಅವರನ್ನು ಏರ್'ಪೋರ್ಟ್'ನಲ್ಲಿ ಬರ ಮಾಡಿಕೊಳ್ಳಲು ಹಿರಿಯ ಸಚಿವರನ್ನು ಸಿಎಂ ನಿತೀಶ್ ಕಳುಹಿಸಿರಲಿಲ್ಲ. ಅಲ್ಲದೆ, ಮಮತಾ ಅವರ ರ್ಯಾಲಿಯಲ್ಲಿ ಆರ್'ಜೆಡಿಯ ಲಾಲು ಪ್ರಸಾದ್ ಯಾದವ್ ಮತ್ತು ಅವರ ಇಬ್ಬರು ಪುತ್ರರೂ ಭಾಗಿಯಾಗಿರಲಿಲ್ಲ.
ಇದೇ ವೇಳೆ, ನಗದುರಹಿತ ವಹಿವಾಟಿಗೆ ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೇ ಸಂಸತ್'ಭವನದಲ್ಲಿ ಇದು ಜಾರಿಯಾಗಿದೆ. ಸಂಸತ್'ಭವನದ ಆವರಣದಲ್ಲಿರುವ ಎಲ್ಲ ಕ್ಯಾಂಟೀನ್‌ಗಳು ಹಾಗೂ ಇತರೆ ಉಪಾಹಾರ ಮಂದಿಗಳಲ್ಲಿ ಬುಧವಾರ ಪ್ಲಾಸ್ಟಿಕ್ ಮನಿ ಪಾವತಿ ವ್ಯವಸ್ಥೆಗೆ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಚಾಲನೆ ನೀಡಿದ್ದಾರೆ. ಸಂಸದರು ಮತ್ತು ಪತ್ರಕರ್ತರ ಕ್ಯಾಂಟೀನು, ಸೆಂಟ್ರಲ್ ಹಾಲ್ ಸೇರಿದಂತೆ ಸಂಸತ್‌ನ 19 ಸ್ಥಳಗಳಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ.
ಏತನ್ಮಧ್ಯೆ, ನೋಟು ಅಮಾನ್ಯದ ಬಳಿಕ ಮದುವೆಯಿರುವ ಕುಟುಂಬಗಳಿಗೆ ನೀಡಿರುವ 2.5 ಲಕ್ಷ ರೂ. ವಿತ್‌ಡ್ರಾ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
---
ನೋಟು ಅಮಾನ್ಯ ಕ್ರಮದಿಂದಾಗಿ ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದೆ ಎಂದು ಹೇಳುವವರು ಮೂರ್ಖರು. ಅದೊಂದು ವೇಳೆ ನಿಜವಾಗಿದ್ದರೆ, ಆ ಪಕ್ಷದ ಕನಿಷ್ಠ 100 ಮಂದಿ ಅಭ್ಯರ್ಥಿಗಳಾದರೂ ಕೌನ್ಸಿಲ್ ಮುಖ್ಯಸ್ಥರಾಗಿ ಆಯ್ಕೆಯಾಗುತ್ತಿದ್ದರು. ಆದರೆ, ಹಾಗಾಗಲಿಲ್ಲ.
- ಶಿವಸೇನೆ, ಸಾಮ್ನಾ ಸಂಪಾದಕೀಯದಲ್ಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.