ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಯ 13 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ | ಮಹಾರಾಷ್ಟ್ರದಲ್ಲಿ ಮಳೆ, ಉಕ್ಕಿದ ಕೃಷ್ಣೆ: ಉತ್ತರ ಕರ್ನಾಟಕ ಮುಳುಗಡೆ | ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಆಶ್ಲೇಷ ಮಳೆಯಬ್ಬರ| ಅಪಾಯ ಮಟ್ಟದಲ್ಲಿ ನದಿಗಳು, ಕೆಲವು ಡ್ಯಾಂಗಳು ಭರ್ತಿ
ಬೆಂಗಳೂರು (ಆ. 07): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೃಷ್ಣಾ ಸೇರಿ ಹಲವು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಆಶ್ಲೇಷ ಮಳೆ ಅಬ್ಬರಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯದ 13 ಜಿಲ್ಲೆಗಳು ಜಲಸಂಕಷ್ಟಕ್ಕೆ ತುತ್ತಾಗಿವೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಜಿಲ್ಲೆಗಳು ಮಹಾರಾಷ್ಟ್ರ ಮಳೆಯಿಂದಾಗಿ ಉಕ್ಕಿ ಹರಿಯುತ್ತಿರುವ ಕೃಷ್ಣೆ ಹಾಗೂ ಅದರ ಉಪನದಿಗಳ ಅಬ್ಬರಕ್ಕೆ ತುತ್ತಾಗಿವೆ. ಇದೇ ವೇಳೆ, ಮಲೆನಾಡು, ಕರಾವಳಿ ಭಾಗದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉತ್ತರ ಕರ್ನಾಟಕದಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಕೃಷ್ಣೆ ಹಾಗೂ ಅದರ ಉಪನದಿಗಳ ಅಬ್ಬರಕ್ಕೆ ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಂತೂ 200ಕ್ಕೂ ಹೆಚ್ಚು ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡವರನ್ನು ಸೇನೆ, ಎನ್‌ಡಿಆರ್‌ಎಫ್, ಪೊಲೀಸರ ನೆರವಿನಿಂದಾಗಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗುತ್ತಿದೆ. ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಈ ಜಿಲ್ಲೆಗಳಿಂದ ಮಹಾರಾಷ್ಟ್ರ, ಗೋವಾ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.
ಮಲೆನಾಡು, ಕರಾವಳಿ ಭಾಗದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲದಿಗ್ಬಂಧನಕ್ಕೊಳಗಾಗಿದೆ. ಕಾಳಿ, ಶರಾವತಿ, ಅಘನಾಶಿನಿ, ಗಂಗಾವಳಿ, ಸೇರಿ ಹಲವು ನದಿ, ಕೊಳ್ಳಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕಣ್ಣುಹಾಯಿಸಿದಲ್ಲಿ ಬರೇ ನೀರೇ ಆವರಿಸಿದೆ.
ಪಶ್ಚಿಮಘಟ್ಟಕೆ ಹೊಂದಿಕೊಂಡಿರುವ ಸಿದ್ದಾಪುರ ತಾಲೂಕಿನಲ್ಲಿ ಶೇ.65ರಷ್ಟುಭಾಗಕ್ಕೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಿಂದ ಹೊರ ಜಿಲ್ಲೆ, ರಾಜ್ಯ ಸಂಪರ್ಕಿಸುವ ರಸ್ತೆಗಳಲ್ಲೇ ದೋಣಿ ಬಳಸಿ ಜನ ಓಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಕೈಗಾ ಟೌನ್‌ಶಿಪ್‌ಗೂ ನೀರು ನುಗ್ಗಿದ್ದು, ಜನ ಮನೆಯಿಂದ ಹೊರಬಾರಲಾಗದ ಸನ್ನಿವೇಶ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನೂರಾರು ವಿದ್ಯುತ್ ಕಂಬಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲೂ ಮಳೆಯಬ್ಬರ ಮುಂದುವರಿದಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೊಡಗಿನಲ್ಲಿ 3ದಿನಗಳ ಮಳೆಗೆ ಭಾಗಮಂಡಲದ ತ್ರಿವೇಣಿ ಸಂಗಮ ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಜಲಾವೃತವಾಗಿದೆ. ನಾಪೋಕ್ಲು ಮತ್ತು ಭಾಗಮಂಡಲ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರದಲ್ಲಿ ತುಂಗಾ, ಹೇಮಾವತಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿ ಶಾರದಾಂಬೆ ಸನ್ನಿಧಿಯ ಕಪ್ಪೆ ಶಂಕರ ದೇವಸ್ಥಾನ ಮುಳುಗಡೆಯಾಗಿದೆ. ಧಾರವಾಡದಲ್ಲೂ ತುಪ್ಪರಿಹಳ್ಳದ ಪ್ರವಾಹದಿಂದಾಗಿ ರೈಲ್ವೆ ಆಸ್ಪತ್ರೆ ಸೇರಿ ಮೂರು ಆಸ್ಪತ್ರೆಗಳಿಗೆ ನೀರು ನುಗ್ಗಿದ್ದು, 100ಕ್ಕೂ ಅಧಿಕಮನೆಗಳಿಗೆ ಹಾನಿಯಾಗಿದೆ.