ಆತಂಕವೇನಿಲ್ಲ, ಬೆಂಗಳೂರಿಗಿದೆ ನೀರು

Published : Sep 19, 2016, 03:49 PM ISTUpdated : Apr 11, 2018, 12:57 PM IST
ಆತಂಕವೇನಿಲ್ಲ, ಬೆಂಗಳೂರಿಗಿದೆ ನೀರು

ಸಾರಾಂಶ

-ಪ್ರಶಾಂತ್‌ಕುಮಾರ್ ಎಂ.ಎನ್

ಬೆಂಗಳೂರು(ಸೆ.20): ಕಾವೇರಿ ನ್ಯಾಯಾಧಿಕರಣದ ಅಂತಿಮ ಆದೇಶದಂತೆ ರಚಿಸಲಾಗಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸೋಮವಾರ ನೀಡಿರುವ ನಿರ್ದೇಶನ ರಾಜ್ಯದ ಪಾಲಿಗೆ ವರದಾನವಾಗದೇ ಹೋದರೂ ನೀರು ಹರಿಸುವ ಭಾರ ಇಳಿಸಿದೆ.

ರಾಜ್ಯದಿಂದ ತಮಿಳುನಾಡಿಗೆ ಈಗಾಗಲೇ ಸಾಕಷ್ಟು ಪ್ರಮಾಣದ ನೀರು ಹರಿದು ಹೋಗಿದ್ದು, ಮುಂದೆ ಜಲಾಶಯಗಳಿಂದ ನೀರು ಹೋಗದಂತೆ ಉಳಿಸಿಕೊಳ್ಳುವುದೇ ನಮ್ಮ ಮುಂದಿದ್ದ ಸವಾಲಾಗಿತ್ತು. ಆದ್ದರಿಂದ ಕರ್ನಾಟಕ ನೀರಿನ ಹಂಚಿಕೆಯಲ್ಲಿ ಉತ್ತಮ ಚೌಕಾಸಿ ಮಾಡಿದೆ ಎನ್ನಬಹುದೇ ವಿನಃ ಲಾಭ ಎನ್ನುವುದು ಕಷ್ಟ ಎಂದು ನೀರಾವರಿ ತಜ್ಞರು ಹೇಳುತ್ತಾರೆ.

ರಾಜ್ಯದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಆಗದಂಥ ಕಠಿಣ ಸ್ಥಿತಿಯಲ್ಲಿದ್ದರೂ ಮೇಲುಸ್ತುವಾರಿ ಸಮಿತಿ ನಿರ್ದೇಶನ 12 ಸಾವಿರ ಕ್ಯುಸೆಕ್‌ನಂಥ ಭಾರಿ ಪ್ರಮಾಣದ ನೀರು ಹರಿಸುವ ಭಾರವನ್ನು ಬಹುಪ್ರಮಾಣದಲ್ಲಿ ತಗ್ಗಿಸಿದೆ.

ಸದ್ಯ ಕಾವೇರಿ ಕೊಳ್ಳದ ಈ ಜಲಾಶಯಗಳಲ್ಲಿ ಸೋಮವಾರದ ನೀರಿನ ಮಟ್ಟ ನೋಡಿದರೆ ಬೆಳೆದು ನಿಂತ ಬೆಳೆಗೆ ಬಿಡಿ, ಬೆಂಗಳೂರು ಸೇರಿ ಉಳಿದ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಸಾಲುವುದೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಈ ಸ್ಥಿತಿಯಲ್ಲಿ ಮೇಲುಸ್ತುವಾರಿ ಸಮಿತಿ ಮುಂದಿನ 10 ದಿನ ಕಾಲ(ಸೆ.21ರಿಂದ 30ರವರೆಗೆ) ಪ್ರತಿದಿನ 3 ಸಾವಿರ ಕ್ಯುಸೆಕ್‌ನಂತೆ ತಮಿಳುನಾಡಿಗೆ ನೀರು ಹರಿಸಲು ಸೂಚಿಸಿದೆ. ಅಂದರೆ ಸುಮಾರು 2.72 ಟಿಎಂಸಿ ನೀರು ಬಿಡಬೇಕು. ಬಿಳಿಗುಂಡ್ಲುವಿನಲ್ಲಿ ಇಷ್ಟು ನೀರು ದಾಖಲಾಗಬೇಕಿದ್ದರೆ ಕನಿಷ್ಟವೆಂದರೂ 3.5 ಟಿಎಂಸಿಯಷ್ಟು ನೀರು ಜಲಾಶಯಗಳಿಂದ ಹೊರಬಿಡಬೇಕು. ಈ ನೀರು ನಮ್ಮ ರಾಜ್ಯದ ಅತ್ಯಮೂಲ್ಯವಾದ ಕುಡಿಯುವ ನೀರಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಆದೇಶ ಪಾಲನೆ ಅನಿವಾರ್ಯ.

ಕಳೆದುಕೊಂಡಿದ್ದೇನು?

ಮೇಲುಸ್ತುವಾರಿ ಸಮಿತಿ ನಿರ್ದೇಶನದಿಂದ ಈಗಾಗಲೇ ಕಾವೇರಿಯಿಂದ ಬಿಟ್ಟಿರುವ ಸುಮಾರು 15 ಟಿಎಂಸಿ ನೀರಿನೊಂದಿಗೆ ಮತ್ತೆ 3.5 ಟಿಎಂಸಿಯಷ್ಟು ನೀರು ಕಳೆದುಕೊಳ್ಳಬೇಕಿದೆ. ಸೆ.5ರ ಸುಪ್ರೀಂ ಆದೇಶದ ಬಳಿಕ ಈವರೆಗೆ ಸುಮಾರು 15 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದ್ದು, ಒಟ್ಟು 18.5 ಟಿಎಂಸಿ ನೀರು ತಮಿಳುನಾಡು ಸೇರಿದಂತಾಗುತ್ತದೆ. ಸುಪ್ರಿಂ ಆದೇಶಕ್ಕೂ ಮುನ್ನ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಂಗ್ರಹವಿದ್ದ 58.1 ಟಿಎಂಸಿ ನೀರಿಗೆ ಹೋಲಿಸಿದರೆ ಇದು ಅಗಾಧ ಪ್ರಮಾಣವೇ ಆಗಿದೆ.

ಸುಪ್ರೀಂ ಆದೇಶದ ಬಳಿಕ ರಾಜ್ಯದ ರೈತರಿಗೂ ನೀರು ನೀಡಿದ್ದ ರಾಜ್ಯ ಸರ್ಕಾರದ ಕ್ರಮದಿಂದಾಗಿ ಒಟ್ಟು ಕಾವೇರಿ ಜಲಾಶಯಗಳಲ್ಲಿ ನೀರಿನ ಪ್ರಮಾಣ 30 ಟಿಎಂಸಿಯಷ್ಟು ಕುಸಿದಿದೆ. ಈಗಿರುವ ನೀರಿನ ಪ್ರಮಾಣವನ್ನೂ ಗಮನಕ್ಕೆ ತೆಗೆದುಕೊಂಡಿರುವ ಉಸ್ತುವಾರಿ ಸಮಿತಿ ಕಾವೇರಿ ಜಲಾನಯನ ಪ್ರದೇಶಗಳ ಮಳೆ ಕೊರತೆ, ಒಳಹರಿವು, ಅಂತರ್ಜಲ ಕುಸಿತ ಸೇರಿ ಕುಡಿಯಲು ಅಗತ್ಯವಿರುವ ನೀರು ಇವೆಲ್ಲದರ ಲೆಕ್ಕಾಚಾರ ಹಾಗೂ ರಾಜ್ಯದ ವಾದ ಪರಿಗಣಿಸಿ ಮುಂದೆ ಹರಿಸಬೇಕಾದ ನೀರಿನ ಪ್ರಮಾಣವನ್ನು 3 ಸಾವಿರ ಕ್ಯುಸೆಕ್‌ಗೆ ನಿಗದಿ ಮಾಡಿದೆ. ಇದು ರಾಜ್ಯದ ಪಾಲಿಗೆ ನೆಮ್ಮದಿಯ ನಿಟ್ಟುಸಿರಲ್ಲದೇ ಹೋದರೂ ಸಮಾಧಾನಕರ ನಿರ್ದೇಶನ ಎಂಬುದು ತಜ್ಞರ ಅಭಿಮತ. 2012ರಲ್ಲಿ ಇಂಥದ್ದೇ ಸಂಕಷ್ಟ ಸ್ಥಿತಿ ಇದ್ದಾಗ್ಯೂ ಪ್ರತಿದಿನ ೯ ಸಾವಿರ ಕ್ಯುಸೆಕ್ ನೀರು ಹರಿಸಬೇಕೆಂದು ಮಾಡಿದ್ದ ಆದೇಶಕ್ಕೆ ಹೋಲಿಸಿದರೆ ಈಗಿನ ನಿರ್ದೇಶನ ಎಷ್ಟೋ ಪಾಲು ಉತ್ತಮ ಎಂದು ಸಮಾಧಾನ ಪಟ್ಟುಕೊಳ್ಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ
ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!