ಕ್ರೀಡಾ ವಿವಿ ಸದ್ಯಕ್ಕಿಲ್ಲ: ಸಿಎಂ ಸಿದ್ದು ಸ್ಪಷ್ಟನೆ

By lakshmi kashyapFirst Published Oct 7, 2016, 3:58 PM IST
Highlights

ವರದಿ: ಡಿ.ಎನ್‌. ಮಹೇಂದ್ರ, ಕನ್ನಡಪ್ರಭ

ಮೈಸೂರು: ಕ್ರೀಡೆಯ ಉತ್ತೇಜನಕ್ಕೆ ವಿಶ್ವವಿದ್ಯಾನಿಲಯ ತೆರೆಯಬೇಕೆಂಬ ಒತ್ತಾಯ ಇದೆಯಾದರೂ, ಸದ್ಯಕ್ಕೆ ಅದರ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Latest Videos

ಇಲ್ಲಿನ ಜೆ.ಕೆ. ಮೈದಾನದ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಯುವಜನ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ 2015ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಸಕ ವಾಸು ಕ್ರೀಡಾ ವಿವಿಗಾಗಿ ಒತ್ತಾಯಿಸಿದ್ದಾರೆ. ಆದರೆ, ಈ ಮುಂಚೆ ಕೃಷಿ ವಿವಿ ಮಾತ್ರ ಇತ್ತು. ಬಳಿಕ ತೋಟಗಾರಿಕೆ ವಿವಿ, ಮೀನುಗಾರಿಕೆ ವಿವಿ ತೆರೆಯಲಾಯಿತು. ಇದರಿಂದ ಏನು ಬದಲಾವಣೆ ಆಗಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಹೀಗಾಗಿ ಕ್ರೀಡಾ ನಿಲಯಗಳಿಗೆ, ಆಟದ ಮೈದಾನಗಳ ಅಭಿವೃದ್ಧಿಗೆ ಹೆಚ್ಚಿನ ಧನ ಸಹಾಯ ನೀಡಲಾಗುವುದು ಎಂದವರು ಹೇಳಿದರು.

ರಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಮಾನ ಉಳಿಸಿದ್ದು ಹೆಣ್ಣುಮಕ್ಕಳು. ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಹೆಣ್ಣು ಮಗಳೇ ಸಾಧನೆ ಮಾಡಿದ್ದು. ಅಂದಮಾತ್ರಕ್ಕೆ ಪುರುಷರೇ ಪ್ರಯೋಜನ ಇಲ್ಲ ಎಂದಲ್ಲ. ಅವರು ಮತ್ತಷ್ಟುಪ್ರಯತ್ನಿಸಿ ಸಾಧನೆ ಮಾಡಬೇಕು. ಕ್ರೀಡೆ ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದ ಕ್ಷೇತ್ರ. ಇದು ಎಲ್ಲಾ ರಾಜ್ಯ ಮತ್ತು ರಾಷ್ಟ್ರವನ್ನು ಬೆಸೆಯುತ್ತದೆ ಎಂದರು.

ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮದ್ವರಾಜ್‌ ಮಾತನಾಡಿ, ಕ್ರೀಡಾ ಸಾಧಕರಿಗೆ ಶಿಕ್ಷಣದಲ್ಲಿ ಕೃಪಾಂಕ (ಗ್ರೇಸ್‌ ಮಾರ್ಕ್ಸ) ನೀಡಬೇಕು. ಒಲಂಪಿಕ್ಸ್‌ನಲ್ಲಿನ ನೀರಸ ಸಾಧನೆಗೆ ಕೇವಲ ಸರ್ಕಾರವನ್ನು ಮಾತ್ರ ದೂರದೆ, ಶಿಕ್ಷಣ ಸಂಸ್ಥೆಗಳು ಮತ್ತು ಪೋಷಕರೂ ಕಾರಣ. ಈಗಾಗಲೇ ನಾವು ಕ್ರೀಡಾ ನೀತಿ ಜಾರಿಗೆ ತರಲು ಉದ್ದೇಶಿಸಿ ಬೆಂಗಳೂರು, ಮೈಸೂರು, ಗುಲ್ಬರ್ಗಾ, ಉಡುಪಿ, ಬೆಳಗಾವಿಯ ಕ್ರೀಡಾಪಟುಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಲಹೆಯ ಮೇರೆಗೆ ಅತ್ಯುತ್ತಮವಾದ ಕ್ರೀಡಾ ನೀತಿ ಜಾರಿಗೆ ತರಲಾಗುವುದು ಎಂದರು.

ವಿಕಲರಿಗೆ ಸ್ಪಂದನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ವಿಕಲಚೇತನರು, ಏಕಲವ್ಯ ಪ್ರಶಸ್ತಿ ಆಯ್ಕೆಯ ವೇಳೆ ತಮ್ಮನ್ನೂ ಪರಿಗಣಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು. ಬಳಿಕ ಅವರು ಸಲ್ಲಿಸಿದ ಮನವಿ ಸ್ವೀಕರಿಸಿದ ಸಿದ್ದರಾಮಯ್ಯ ಪರಿಶೀಲಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಮಾಜಿ ಸಚಿವ ಅಭಯಚಂದ್ರ ಜೈನ್‌, ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್‌, ಕರ್ನಾಟಕ ಒಲಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜ್‌, ಮೇಯರ್‌ ಬಿ.ಎಲ್‌. ಬೈರಪ್ಪ, ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ನಿರ್ದೇಶಕ ಅನುಪಮ್‌ ಅಗರವಾಲ್‌, ಜಿಲ್ಲಾಧಿಕಾರಿ ಡಿ. ರಂದೀಪ್‌ ಇದ್ದರು.

click me!