
ನವದೆಹಲಿ: ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸುವ ಒಪ್ಪಂದದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಇದೊಂದು ಪರಿಶುದ್ಧ ಒಪ್ಪಂದ. ಈ ಬಗ್ಗೆ ನಾನು ಸುಳ್ಳು ಹೇಳುತ್ತಿಲ್ಲ ಎಂದು ರಫೇಲ್ ವಿಮಾನಗಳ ತಯಾರಿಕಾ ಕಂಪನಿಯಾದ ಡಸಾಲ್ಟ್ ಏವಿಯೇಷನ್ ಸಿಇಒ ಎರಿಕ್ ಟ್ರ್ಯಾಪಿಯರ್ ಸ್ಪಷ್ಟಪಡಿಸಿದ್ದಾರೆ.
ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಎಎನ್‌ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ‘ನಾನು ಸುಳ್ಳು ಹೇಳುವುದಿಲ್ಲ. ಈ ಹಿಂದೆಯೇ ಸತ್ಯ ಹೇಳಿದ್ದೇನೆ. ನಾನು ಈವರೆಗೂ ನೀಡಿರುವ ಹೇಳಿಕೆಗಳು ನಿಜ. ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ಸಿಇಒ ಆಗಿದ್ದುಕೊಂಡು, ಸುಳ್ಳು ಹೇಳಲು ಆಗುವುದಿಲ್ಲ’ ಎಂದು ಖಂಡತುಂಡವಾಗಿ ಹೇಳಿದ್ದಾರೆ. ಆದರೆ ಎರಿಕ್ ಅವರ ಸಂದರ್ಶನಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಇದೊಂದು ಹೇಳಿಬರೆಸಿದ ಸಂದರ್ಶನ. ರಫೇಲ್ ಹಗರಣವನ್ನು ಸೃಷ್ಟಿಸಲಾದ ಸುಳ್ಳುಗಳು ಹತ್ತಿಕ್ಕಲಾರವು ಎಂದಿದೆ.
ನೆಹರು ಜತೆಗೂ ಒಪ್ಪಂದ:
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳಿಗೆ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿರುವ ಎರಿಕ್, ಕಾಂಗ್ರೆಸ್ಸಿನ ಜತೆಗೂ ನಮಗೆ ದೀರ್ಘ ಕಾರ್ಯನಿರ್ವಹಣೆ ಅನುಭವವಿದೆ. ನಾವು ಭಾರತದಲ್ಲಿ ಮೊದಲು ಒಪ್ಪಂದ ಮಾಡಿಕೊಂಡಿದ್ದು ನೆಹರು ಅವರ ಜತೆ. 1953ರಲ್ಲಿ. ಇತರ ಪ್ರಧಾನಿಗಳ ಜತೆಗೂ ಕೆಲಸ ಮಾಡಿದ್ದೇವೆ. ನಾವು ಭಾರತೀಯ ಸೇನೆಗಾಗಿ ಭಾರತದಲ್ಲಿ ಕೆಲಸ ಮಾಡುತ್ತಿದ್ದೆವೆಯೇ ಹೊರತು ಯಾವುದೋ ರಾಜಕೀಯ ಪಕ್ಷಕ್ಕಾಗಿ ಅಲ್ಲ ಎಂದಿದ್ದಾರೆ.
ಅಲ್ಲದೆ, ಅನಿಲ್ ಅಂಬಾನಿ ಅವರನ್ನು ಭಾರತೀಯ ಪಾಲುದಾರರನ್ನಾಗಿ ನಾವೇ ಆಯ್ಕೆ ಮಾಡಿಕೊಂಡಿದ್ದೇವೆ. ಇತರೆ ಪಾಲುದಾರರಿಗೂ ಹುಡುಕಾಡುತ್ತಿದ್ದೇವೆ. ರಿಲಯನ್ಸ್ ಹೊರತಾಗಿ 30 ಪಾಲುದಾರರನ್ನು ಈಗಾಗಲೇ ಭಾರತದಲ್ಲಿ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರ ಹಾಗೂ ಸರ್ಕಾರದ ನಡುವೆ ಒಪ್ಪಂದ ಏರ್ಪಟ್ಟಹಿನ್ನೆಲೆಯಲ್ಲಿ 36 ವಿಮಾನಗಳ ಬೆಲೆ ಶೇ.9ರಷ್ಟುಇಳಿಕೆಯಾಗಿದೆ ಎಂದಿದ್ದಾರೆ.
ಬಿಜೆಪಿ- ಡಸಾಲ್ಟ್ ಮ್ಯಾಚ್ ಫಿಕ್ಸ್:
ಆದರೆ ಈ ಸಂದರ್ಶನದ ಬಗ್ಗೆಯೇ ಕಾಂಗ್ರೆಸ್ ವ್ಯಂಗ್ಯವಾಡಿದೆ. ಇದೊಂದು ಹೇಳಿಬರೆಸಿದ ಸಂದರ್ಶನ. ರಫೇಲ್ ಹಗರಣವನ್ನು ಸೃಷ್ಟಿಸಲಾದ ಸುಳ್ಳುಗಳು ಹತ್ತಿಕ್ಕಲಾರವು. ಸತ್ಯ ಹೊರಬರುವುದಕ್ಕೂ ಅದರದ್ದೇ ಆದ ದಾರಿ ಇದೆ. ಇಂತಹ ತಿರುಚಿದ ವಿವರಣೆಗಳ ಬದಲು ಪಾರದರ್ಶಕ ತನಿಖೆಯ ಅಗತ್ಯ ದೇಶಕ್ಕೆ ಇದೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ಹಾಗೂ ಡಸಾಲ್ಟ್ ಕಂಪನಿ ಜತೆ ಮ್ಯಾಚ್ ಫಿಕ್ಸ್ ಆಗಿದೆ. ಪ್ರಧಾನಿ ಅವರ ಪ್ರಚಾರ ತಂತ್ರಗಳು ಹಾಗೂ ಎರಿಕ್ ಅವರು ಸೇರಿಕೊಂಡು ಭ್ರಷ್ಟಾಚಾರವನ್ನು ಮುಚ್ಚಿಡಲು ಆಗದು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ