
ಬೆಂಗಳೂರು : ಜೀವದ ಹಂಗು ತೊರೆದು ದೇಶದ ನೈಸರ್ಗಿಕ ಸಂಪತ್ತಾದ ಅರಣ್ಯವನ್ನು ಸಂರಕ್ಷಿಸುವ ಉಪ ವಲಯ ಅರಣ್ಯಾಧಿಕಾರಿಗಳಿಗೆ ಕಳೆದ 15 ವರ್ಷಗಳಿಂದ ವೇತನ ಪರಿಷ್ಕರಣೆಯಾಗಿಲ್ಲ. ರಾಜ್ಯಾದ್ಯಂತ ಸುಮಾರು 2,700ಕ್ಕೂ ಹೆಚ್ಚು ಮಂದಿ ಉಪ ವಲಯ ಅರಣ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು, ಮೂಲ ವೇತನ ಹೆಚ್ಚಳವಾಗದೆ ಕಡಿಮೆ ವೇತನದಲ್ಲಿ ಹೆಚ್ಚು ದುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಉಪ ವಲಯ ಅರಣ್ಯ ಅಧಿಕಾರಿಗಳು (ಡಿಆರ್‌ಎಫ್‌ಒ) ಅರಣ್ಯ ಕಂದಾಯ ಪ್ರದೇಶಗಳೂ ಸೇರಿದಂತೆ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 20,000 ಹೆಕ್ಟೇರ್ ಪ್ರದೇಶದಲ್ಲಿನ ಅರಣ್ಯ ಸಂಪತ್ತು, ವನ್ಯಜೀವಿ ಸಂಪತ್ತನ್ನು ರಕ್ಷಿಸುತ್ತಿದ್ದಾರೆ.
ಅರಣ್ಯಕ್ಕೆ ಬೆಂಕಿ ಬಿದ್ದಾಗ ಜೀವದ ಹಂಗು ತೊರೆದು ಆರಿಸುವವರು ಇವರೇ. ವನ್ಯಜೀವಿ ಪ್ರದೇಶಗಳಲ್ಲಿ ಬಿಸಿಲು, ಮಳೆ, ಬೆಂಕಿ, ನಿಸರ್ಗದ ವೈಪರೀತ್ಯಗಳನ್ನು, ವನ್ಯಜೀವಿಗಳ ದಾಳಿಯನ್ನು ಮತ್ತು ಕಳ್ಳಕಾಕರಿಂದಾಗುವ ಜೀವ ಹಾನಿಯನ್ನೂ ಲೆಕ್ಕಿಸದೆ ಹಗಲು ರಾತ್ರಿ ಗಸ್ತು ತಿರುಗಿ ಇವರು ರಕ್ಷಣೆ ಮಾಡುತ್ತಾರೆ. ಆದರೂ ಇವರ ವೇತನ ಪರಿಷ್ಕರಣೆಗೆ ಸರ್ಕಾರ ಮುಂದಾಗಿಲ್ಲ.
ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಪೋಲೀಸ್ ಸಬ್ ಇನ್‌ಸ್ಪೆಕ್ಟರ್, ಸಹಾಯಕ ತೋಟಗಾರಿಕೆ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಮಾನಾಂತರ ಹುದ್ದೆಯಾಗಿದೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಯ ವೇತನ ಶ್ರೇಣಿ 37,900 ರು.ಗಳಿಂದ ಪ್ರಾರಂಭವಾಗುತ್ತದೆ. ಆದರೆ, ಉಪ ವಲಯ ಅರಣ್ಯಾಧಿಕಾರಿಗಳ ವೇತನ ಶ್ರೇಣಿ 12,500 ರು.ದಿಂದ ಆರಂಭವಾಗುತ್ತದೆ. ಈ ತಾರತಮ್ಯ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮಕ್ಕೆ ವಿರುದ್ಧವಾಗಿದೆ ಎಂದು ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಸದಸ್ಯರು ಆರೋಪಿಸುತ್ತಾರೆ.
ಉಪ ವಲಯ ಅರಣ್ಯಾಧಿಕಾರಿ ನೇಮಕಾತಿಗೆ ಈ ಹಿಂದೆ ಇದ್ದ ಪಿಯುಸಿ ವಿದ್ಯಾರ್ಹತೆಯನ್ನು 2012ರಲ್ಲಿ ಪದವಿ (ವಿಜ್ಞಾನ ವಿಭಾಗ)ಗೆ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಮೋಜಣಿದಾರರ (ಸರ್ವೇಯರ್) ಹುದ್ದೆಗಳನ್ನು 2014ರಲ್ಲಿ ಇದೇ ಹುದ್ದೆಯಲ್ಲಿ ವಿಲೀನಗೊಳಿಸಲಾಗಿದೆ. ನೇಮಕಾತಿ ಸಂದರ್ಭದಲ್ಲಿ ತರಬೇತಿ ಅವಧಿಯನ್ನು ಒಂದು ವರ್ಷದಿಂದ 1 ವರ್ಷ 3 ತಿಂಗಳಿಗೆ ಹೆಚ್ಚಳ ಮಾಡಲಾಗಿದೆ. ಆದರೂ, ವೇತನ ಶ್ರೇಣಿ ಹೆಚ್ಚಳಕ್ಕೆ ಸರ್ಕಾರ ಮುಂದಾಗುತ್ತಿಲ್ಲ.
ವೇತನ ಶ್ರೇಣಿ ಹೆಚ್ಚಳ ಮಾಡುವಂತೆ ಕಳೆದ 10 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೂ ವೇತನ ಶ್ರೇಣಿಯನ್ನು ಪರಿಷ್ಕರಣೆ ಮಾಡಿಲ್ಲ. ವೇತನ ಆಯೋಗ ಶಿಫಾರಸು ಮಾಡದಿದ್ದರೂ ಸರ್ಕಾರಿ ವಾಹನ ಚಾಲಕರ ವೇತನ ಪರಿಷ್ಕರಣೆ ಮಾಡಲಾಗಿದೆ. ಆದರೆ, ಉಪ ವಲಯ ಅರಣ್ಯಾಧಿಕಾರಿಗಳ ವೇತನ ಪರಿಷ್ಕರಣೆಗೆ ಮಾತ್ರ ಇದು ವೇತನ ಆಯೋಗಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ ಎಂದು ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿಗಳ ವೇತನ ಪರಿಷ್ಕರಣೆ ಮಾಡುವಂತೆ ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೆ, ವೇತನ ಆಯೋಗದ ಗಮನಕ್ಕೂ ತರಲಾಗಿದೆ. ಆದರೆ, ಈ ಬಗ್ಗೆ ಇಲ್ಲಿಯವರೆಗೂ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಈ ಸಿಬ್ಬಂದಿ ಹೆಚ್ಚು ಕೆಲಸ ಮಾಡುತ್ತಿದ್ದು, ಕಡಿಮೆ ವೇತನ ಪಡೆಯುತ್ತಿದ್ದಾರೆ. ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಂಡರೆ ನೆರವಾಗಲಿದೆ.
- ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.