
ಬೆಂಗಳೂರು: ಟ್ರ್ಯಾಕ್ಟರ್ ಮತ್ತು ಟ್ರೈಲರ್ ಚಾಲನೆಗೆ ಪ್ರತ್ಯೇಕ ಪರವಾನಗಿ ಹೊಂದಿರಬೇಕಿಲ್ಲ. ಲಘು ಮೋಟಾರು ವಾಹನ ವರ್ಗದ ವಾಹನಗಳ ಚಾಲನಾ ಪರವಾನಗಿ ಹೊಂದಿದ್ದರೆ ಸಾಕು ಟ್ರೈಲರ್‌ನೊಂದಿಗೆ ಟ್ರ್ಯಾಕ್ಟರ್ ಚಾಲನೆ ಮಾಡಬಹುದು.
ಇಂತಹೊಂದು ಆದೇಶ ಹೊರಡಿಸುವ ಮೂಲಕ ಟ್ರ್ಯಾಕ್ಟರ್ ಚಾಲನೆ ಪರವಾನಗಿ ಹೊಂದಿದ್ದರೂ ಟ್ರೈಲರ್ ಚಾಲನೆಗೆ ಅನುಮೋದನೆ ಪತ್ರ ಹೊಂದಿಲ್ಲ ಎಂಬ ಕಾರಣಕ್ಕೆ ಅಪಘಾತ ಪ್ರಕರಣವೊಂದರ ಸಂತ್ರಸ್ತನಿಗೆ ಲಕ್ಷಾಂತರ ರು. ಹಣ ಪಾವತಿಸಬೇಕಾದ ಹೊಣೆಗಾರಿಕೆ ಹೊತ್ತಿದ್ದ ಟ್ರ್ಯಾಕ್ಟರ್‌ವೊಂದರ ಮಾಲೀಕನಿಗೆ ಹೈಕೋರ್ಟ್ ನಿರಾಳತೆ ಮೂಡಿಸಿದೆ.
ಅಲ್ಲದೆ, ಸಂತ್ರಸ್ತನಿಗೆ ₹12 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಪಾವತಿಸುವುದಕ್ಕೆ ಟ್ರ್ಯಾಕ್ಟರ್‌ನ ವಿಮೆ ಹೊಂದಿದ್ದ ವಿಮಾ ಕಂಪನಿಯನ್ನು ಹೊಣೆಗಾರಿಕೆ ಮಾಡಿದೆ.
ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 10, ವಾಹನ ಪರವಾನಗಿಗಳ ವರ್ಗೀಕರಣವನ್ನು ತಿಳಿಸುತ್ತದೆ. ವಾಹನಗಳ ಗಾತ್ರ ಆಧರಿಸಿ ಈ ವರ್ಗೀಕರಣ ಮಾಡಲಾಗಿದೆ. ಒಂದು ವರ್ಗದ ಪರವಾನಗಿಯನ್ನು ಒಬ್ಬ ವ್ಯಕ್ತಿಗೆ ನೀಡಿದರೆ, ಅದೇ ವರ್ಗದ ವ್ಯಾಪ್ತಿಗೆ ಬರುವ ಎಲ್ಲ ವಾಹನಗಳ ಚಾಲನೆಗೂ ಪರವಾನಗಿ ಪಡೆದುಕೊಂಡಂತೆ. ಅದರ ಬದಲು ಒಂದೇ ವರ್ಗದ ಒಂದೊಂದು ಮಾದರಿ ವಾಹನಗಳ ಚಾಲನೆಗೂ ಬೇರೆ ಬೇರೆ ಪರವಾನಗಿ ಹೊಂದಬೇಕಿಲ್ಲ. ಲಘು ಮೋಟಾರು ವಾಹನ ವರ್ಗದಡಿಗೆ ಟ್ರ್ಯಾಕ್ಟರ್ ಬರಲಿದೆ. ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದರೆ, ಟ್ರೈಲರ್’ನೊಂದಿಗೆ ಟ್ರ್ಯಾಕ್ಟರ್ ಓಡಿಸಬಹುದು.
ಆದರೆ, ಟ್ರೈಲರ್ ಚಾಲನೆಗೆ ಪ್ರತ್ಯೇಕ ಅನುಮೋದನೆ ಪತ್ರ ಪಡೆಯಬೇಕಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಆನೇಕಲ್‌ನಲ್ಲಿ ನಡೆದಿದ್ದ ಅಪಘಾತ: 2011ರ ಏ.25ರಂದು ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಶಿವನಹಳ್ಳಿಯಲ್ಲಿ ಕೂಲಿಕಾರ ಮಲ್ಲೇಶ್‌ಗೆ ದೊಡ್ಡ ವೆಂಕಟರಮಣಪ್ಪ ಒಡೆತನದ ಟ್ರೈಲರ್ ಜತೆಗಿನ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿತ್ತು. ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಲ್ಲೇಶ್ ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದರೂ ಉದ್ಯೋಗ ಮಾಡಲಾಗದಂತಹ ಸ್ಥಿತಿಗೆ ತಲುಪಿದ್ದರು. ಪ್ರಕರಣ ಸಂಬಂಧ ಟ್ರ್ಯಾಕ್ಟರ್ ಮತ್ತದರ ಚಾಲಕನ ವಿರುದ್ಧ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯ ದೂರು ದಾಖಲಿಸಲಾಗಿತ್ತು.
ಇತ್ತ ಮಲ್ಲೇಶ್ ಪರಿಹಾರಕ್ಕಾಗಿ ಎಂಎಸಿಟಿ ಮೆಟ್ಟಿಲೇರಿದ್ದರು. ಆ ಅರ್ಜಿ ವಿಚಾರಣೆ ವೇಳೆ ವಿಚಾರಣೆ ನಡೆಸಿದ್ದ ಎಂಎಸಿಟಿ, ಪ್ರಕರಣದಲ್ಲಿ ಅಪಘಾತದ ವೇಳೆ ಚಾಲಕನು ಟ್ರ್ಯಾಕ್ಟರ್ ಚಾಲನಾ ಪರವಾನಗಿ ಹೊಂದಿದ್ದ. ಆದರೆ, ಟ್ರೈಲರ್ ಚಾಲನೆಗೆ ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ ಪರವಾನಗಿ ಹೊಂದಿರದ ಚಾಲಕನನ್ನು ನೇಮಿಸಿಕೊಂಡಿದ್ದ ಟ್ರ್ಯಾಕ್ಟರ್ ಮಾಲೀಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.