
ಜೈಪುರ: ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ರಾತ್ರಿ 8 ಗಂಟೆ ಬಳಿಕ ಮದ್ಯ ಮಾರಾಟಕ್ಕೆ ಪೂರ್ಣ ನಿಷೇಧ ಹೇರಿದೆ.
ಈ ಕುರಿತು ಸ್ವತಃ ಸಿಎಂ ಅಶೋಕ್ ಗೆಹ್ಲೋಟ್, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇದೇ ನೀತಿ ಜಾರಿಗೊಳಿಸಲಾಗಿತ್ತು. ಇದರ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಪುನಃ ಆ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಒಂದು ವೇಳೆ ರಾತ್ರಿ 8 ಗಂಟೆ ಬಳಿಕ ಯಾವುದೇ ಮದ್ಯಮಳಿಗೆಯಲ್ಲಿ ಮದ್ಯ ಮಾರಾಟ ಮಾಡಿದ್ದು ಕಂಡುಬಂದರೆ, ತಕ್ಷಣವೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಥ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಬೇಕು. ಜೊತೆಗೆ ಮದ್ಯದ ಅಂಗಡಿಗಳಲ್ಲಿ ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಿಎಂ ಗೆಹ್ಲೋಟ್ ಸೂಚಿಸಿದರು.